ಭುವನೇಶ್ವರ: ಒಡಿಶಾಕ್ಕೆ ಭೇಟಿ ನೀಡಿರುವ ಮೈಕ್ರೋಸಾಪ್ಟ್ ಸಹ –ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಭೇಟಿಯಾಗಿದ್ದಾರೆ.
ಪಟ್ನಾಯಕ್ ಅವರ ನಿವಾಸದಲ್ಲಿ ಭೇಟಿಯಾದ ಗೇಟ್ಸ್ ಅವರು, ರೈತರ ಸಬಲೀಕರಣಕ್ಕೆ ತಂತ್ರಜ್ಞಾನ ಆಧಾರಿತ ಉಪಕ್ರಮಗಳ ಕುರಿತು ಮತ್ತು ರಾಜ್ಯ ಸರ್ಕಾರದ ವಿವಿಧ ಉಪಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ.
ಈ ಕುರಿತು, ಪಟ್ನಾಯಕ್ ಅವರು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘ರಾಜ್ಯ ಸರ್ಕಾರದ ಯೋಜನೆಗಳಾದ ಜಗ ಮಿಷನ್, ಮಿಷನ್ ಶಕ್ತಿ, ಶಾಲೆಗಳ ಅಭಿವೃದ್ಧಿ, ಆರೋಗ್ಯಕ್ಕೆ ಸಂಬಂಧಿಸಿದ ಉಪಕ್ರಮಗಳ ಬಗ್ಗೆ ಬಿಲ್ ಗೇಟ್ಸ್ ಅವರೊಂದಿಗೆ ಚರ್ಚಿಸಲಾಯಿತು’ ಎಂದು ಬರೆದುಕೊಂಡಿದ್ದಾರೆ.
ಇದೇ ವೇಳೆ ಪಟ್ನಾಯಕ್ ಅವರು, ಬಿಲ್ ಮತ್ತು ಮಿಲಿಂದಾ ಗೇಟ್ಸ್ ಅವರ ಸಂಸ್ಥೆ, ಜನರಿಗೆ ಉಪಯುಕ್ತವಾಗುವ ಯೋಜನೆಗಳನ್ನು ಕೈಗೊಂಡಿರುವುದರ ಬಗ್ಗೆ ಶ್ಲಾಘಿಸಿದರು. ಅಲ್ಲದೆ ಒಡಿಶಾದ ಅಭಿವೃದ್ಧಿಗೆ ವಿವಿಧ ವಿಭಾಗಗಳಲ್ಲಿ ಕೈಗೆತ್ತಿಕೊಳ್ಳುತ್ತಿರುವ ಹಲವು ಉಪಕ್ರಮಗಳಿಗಾಗಿ ಧನ್ಯವಾದ ತಿಳಿಸಿದ್ದಾರೆ.
ಬುಧವಾರ ಬೆಳಿಗ್ಗೆ ಭುವನೇಶ್ವರದ ಕೊಳೆಗೇರಿ ಪ್ರದೇಶಗಳಿಗೆ ಭೇಟಿ ನೀಡಿದ್ದ ಗೇಟ್ಸ್, ಅಲ್ಲಿನ ನಿವಾಸಿಗಳೊಂದಿಗೆ ಸಂವಾದ ನಡೆಸಿದ್ದಾರೆ.
‘ಮಾ ಮಂಗಳ ಬಸ್ತಿ’ಯಲ್ಲಿರುವ ಬಿಜು ಆದರ್ಶ್ ಕಾಲೊನಿಗೆ ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಅವರು ಭೇಟಿ ನೀಡಿದ್ದರು. ಸ್ಥಳೀಯರ ಯೋಗ ಕ್ಷೇಮ ವಿಚಾರಿಸಿದ ಗೇಟ್ಸ್, ಅಲ್ಲಿನ ಮಹಿಳಾ ಸ್ವ-ಸಹಾಯ ಗುಂಪುಗಳ ಸದಸ್ಯರು ಹಾಗೂ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಫಲಾನುಭವಿಗಳೊಂದಿಗೆ ಮಾತುಕತೆ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.