ADVERTISEMENT

ಎನ್‌ಡಿಎಗೆ ಬೆಂಬಲ ನೀಡಲು ವೈಎಸ್‌ಆರ್‌ ಕಾಂಗ್ರೆಸ್‌ ನಿರ್ಧಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜುಲೈ 2023, 5:13 IST
Last Updated 27 ಜುಲೈ 2023, 5:13 IST
ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿ
ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿ   

ನವದೆಹಲಿ: ಎನ್‌ಡಿಎಯಿಂದ ಅಂತರ ಕಾಯ್ದುಕೊಂಡಿದ್ದ ವೈಆರ್‌ಎಸ್‌ ಕಾಂಗ್ರೆಸ್‌ ಪಕ್ಷ ಮತ್ತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ನಿರ್ಧರಿಸಿದೆ ಎಂದು ವರದಿಯಾಗಿದೆ.

ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ವೈಆರ್‌ಎಸ್‌ ಕಾಂಗ್ರೆಸ್‌ ಬಿಜೆಪಿಯನ್ನು ಬೆಂಬಲಿಸಲಿದೆ. ಈ ಮೂಲಕ ಅವಿಶ್ವಾಸ ನಿರ್ಣಯದ ವಿರುದ್ಧ ಮತ ಚಲಾಯಿಸಲಿದೆ ಎಂದು ವೈಆರ್‌ಎಸ್‌ ಕಾಂಗ್ರೆಸ್‌ ಉನ್ನತ ಮೂಲಗಳು ತಿಳಿಸಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. 

ಬಿಜೆಪಿ ಮಂಡಿಸುವ ಮಸೂದೆಗಳಿಗೂ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಬೆಂಬಲ ನೀಡಲಿದೆ ಎಂದು ವೈಆರ್‌ಎಸ್‌ ಕಾಂಗ್ರೆಸ್‌ ಪಕ್ಷದ ರಾಜ್ಯಸಭೆಯ ನಾಯಕ ವಿ. ವಿಜಯಸಾಯಿ ರೆಡ್ಡಿ ಹೇಳಿದ್ದಾರೆ.

ADVERTISEMENT

ದೆಹಲಿಯ ಸೇವಾ ವಿಷಯಗಳ ಆಡಳಿತಾತ್ಮಕ ನಿಯಂತ್ರಣ ಮಸೂದೆ ಸೇರಿದಂತೆ ವಿವಿಧ ಮಸೂದೆಗಳಿಗೂ ವೈಆರ್‌ಎಸ್‌ ಕಾಂಗ್ರೆಸ್‌ ಬೆಂಬಲ ನೀಡಲಿದೆ. 

ಮುಖ್ಯವಾಗಿ ದೆಹಲಿಯ ಸೇವಾ ವಿಷಯಗಳ ಆಡಳಿತಾತ್ಮಕ ನಿಯಂತ್ರಣ ಮಸೂದೆ ಮಂಡನೆಗೆ ಉಭಯ ಸದನಗಳಲ್ಲಿ ಯಾವುದೇ ಆತಂಕ ಎದುರಾಗುವುದಿಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ವೈಆರ್‌ಎಸ್‌ ಕಾಂಗ್ರೆಸ್‌ ಲೋಕಸಭೆಯಲ್ಲಿ 22 ಹಾಗೂ ರಾಜ್ಯಸಭೆಯಲ್ಲಿ 9 ಸಂಸದರನ್ನು ಒಳಗೊಂಡಿದೆ. ವೈಆರ್‌ಎಸ್‌ ಕಾಂಗ್ರೆಸ್‌ ಬಿಜೆಪಿ ನೇತೃತ್ವದ ಎನ್‌ಡಿಎಗೆ ಬೆಂಬಲ ನೀಡುವುದರಿಂದ ಸದಸ್ಯರ ಬಲ 357 ಆಗಲಿದೆ. 

 ಲೋಕಸಭೆಯ ಒಟ್ಟು ಸದಸ್ಯರ ಸಂಖ್ಯೆ 543. ಬಹುಮತಕ್ಕೆ 272 ಸದಸ್ಯರ ಬೆಂಬಲ ಬೇಕಿದೆ. ‘ಇಂಡಿಯಾ’ದ ಸದಸ್ಯರ ಬಲ 154 ಇದೆ. ಉಳಿದಂತೆ ಬಿಜೆಡಿ 12, ಅಕಾಲಿದಳ 2 ಹಾಗೂ ಜೆಡಿಎಸ್‌ನ ಒಬ್ಬರು ಸದಸ್ಯ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.