ಕೊಚ್ಚಿ: ಕಳೆದ ಬಾರಿಯಂತೇ ಈ ಬಾರಿಯೂ ಶಬರಿಮಲೆಯ ಅಯ್ಯಪ್ಪ ದೇಗುಲ ಪ್ರವೇಶಿಸಲು ಪ್ರಯತ್ನಿಸಿದಪ್ರಾಧ್ಯಾಪಕಿ ಬಿಂದು ಅಮ್ಮಿನಿ ಎಂಬುವವರ ಮೇಲೆ ಸೋಮವಾರ ಕೊಚ್ಚಿ ಪೊಲೀಸ್ ಆಯುಕ್ತರ ಕಚೇರಿಯ ಹೊರಗೇ ಸ್ಥಳೀಯ ಗುಂಪೊಂದುದಾಳಿ ನಡೆಸಿದೆ..
ಪುಣೆ ಮೂಲದ ತೃಪ್ತಿ ದೇಸಾಯಿ ಅವರೊಂದಿಗೆ ಸೋಮವಾರ ಶಬರಿಮಲೆಗೆ ತೆರಳಲು ಬಿಂದು ಅಮ್ಮಿನಿ ಅವರು ನಿರ್ಧರಿಸಿದ್ದರು.ಹಾಗಾಗಿ ಸೂಕ್ತ ಭದ್ರತೆ ಕೋರಲು ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿದ್ದರು. ಈ ವೇಳೆ ಅವರ ಮೇಲೆ ಪೆಪ್ಪರ್ ಸ್ಪ್ರೇ ಮಾಡಿಲಾಗಿದೆ.
‘ಭದ್ರತೆ ಕೋರಿ ಕೊಚ್ಚಿ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿದ ಬಿಂದು ಅಮ್ಮಿನಿ ಮತ್ತು ತೃಪ್ತಿ ದೇಸಾಯಿ ಅವರೊಂದಿಗೆ ಸ್ಥಳೀಯ ಬಲಪಂಥೀಯ ಗುಂಪಿನ ಸದಸ್ಯರು ಮೊದಲಿಗೆ ವಾಗ್ವಾದಕ್ಕಿಳಿದರು. ನಂತರ ಬಿಂದು ಅಮ್ಮಿನಿ ಅವರ ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿಲಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು,’ ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕೇರಳದ ಕಣ್ಣೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿರುವ ಬಿಂದು ಅಮ್ಮಿನಿ ಅವರು ಇದೇ ಜನವರಿಯಲ್ಲಿ ಮಧ್ಯರಾತ್ರಿ 1.26ರ ಸುಮಾರಿನಲ್ಲಿ ದೇಗುಲ ಪ್ರವೇಶಿಸಿದ್ದರು. ಅವರ ಜೊತೆಗೆ ಕನಕದುರ್ಗ ಎಂಬುವವರೂ ದೇಗುಲ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದರು.
ಸಂವಿಧಾನದ ದಿನದಂದೇ ದೇಗುಲ ಪ್ರವೇಶಕ್ಕೆ ನಿರ್ಧಾರ
‘ನ.26 ದೇಶದ ಸಂವಿಧಾನದ ದಿನ. ಈ ದಿನವೇ ನಾವು ಶಬರಿಮಲೆಯ ಅಯ್ಯಪ್ಪ ದೇಗುಲ ಪ್ರವೇಶಿಸಲು ನಿರ್ಧರಿಸಿದ್ದೆವೆ. ಇದಕ್ಕಾಗಿಯೇ 2018ರ ಸುಪ್ರೀಂ ಕೋರ್ಟ್ ಆದೇಶದೊಂದಿಗೆ ನಾವಿಲ್ಲಿಗೆ ಬಂದಿದ್ದೇವೆ. ದೇಗುಲ ಪ್ರವೇಶ ಮಾಡಿಯೇ ನಾನು ಹಿಂದಿರುಗುತ್ತೇನೆ,’ ಎಂದು ಪುಣೆ ಮೂಲದ ಹೋರಾಟಗಾರ್ತಿ ತೃಪ್ತಿ ದೇಸಾಯಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಲ್ಲದೆ, ‘ಶಬರಿಮಲೆಗೆ ತೆರಳಲು ಬಂದಿರುವ ನಮ್ಮನ್ನು ರಾಜ್ಯ ಸರ್ಕಾರ ಅಥವಾ ಪೊಲೀಸರು ತಡೆಯಲಿ ನೋಡೋಣ. ಭದ್ರತೆ ಸಿಕ್ಕರೂ, ಸಿಗದೇ ಹೋದರೂ ನಾವು ದೇಗುಲ ಪ್ರವೇಶ ಮಾಡಿಯೇ ತೀರುತ್ತೇವೆ,’ ಎಂದೂ ಅವರು ಹೇಳಿದ್ದಾರೆ.
ಕಳೆದ ವರ್ಷ ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಮುಂದಾಗಿದ್ದ ತೃಪ್ತಿ ದೇಸಾಯಿ ಅವರ ವಿರುದ್ಧ ಭಾರಿ ಹೋರಾಟಗಳು ನಡೆದಿದ್ದವು. ಕೊಚ್ಚಿ ವಿಮಾನ ನಿಲ್ದಾಣದಿಂದ ಹೊರ ಬಾರಲೂ ಅವರಿಗೆ ಹೋರಾಟಗಾರರು ಅವಕಾಶ ನೀಡಿರಲಿಲ್ಲ. ಹೀಗಾಗಿ ಅವರು ಪುಣೆಗೆ ಹಿಂದಿರುಗಿದ್ದರು.
ಇದನ್ನೂ ಓದಿ
ಇಂದು ಅಯ್ಯಪ್ಪನೆಂದು ಜನಪ್ರಿಯವಾಗಿರುವ ದೇವತೆಯ ಆಗಮ, ಇತಿಹಾಸ ಮತ್ತು ಶಾಸ್ತ್ರೀಯ ಹಿನ್ನೆಲೆ–ಆಚರಣೆಯ ಸಮಗ್ರ ಮಾಹಿತಿ ನೀಡುವ ಅಪರೂಪದ ಬರಹ ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.