ನವದೆಹಲಿ: ಶಿಕ್ಷಕ ಶಿಕ್ಷಣದ ಎಲ್ಲ ಸಂಸ್ಥೆಗಳಲ್ಲಿ ಮತ್ತು ಶಿಕ್ಷಕ ಶಿಕ್ಷಣ ಕೋರ್ಸ್ ಇರುವ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ 30 ದಿನಗಳೊಳಗೆ ಬಯೊಮೆಟ್ರಿಕ್ ಹಾಜರಾತಿ ವ್ಯವಸ್ಥೆ ಅಳವಡಿಸಬೇಕು ಎಂದು ರಾಷ್ಟ್ರೀಯ ಶಿಕ್ಷಕ ಶಿಕ್ಷಣ ಪರಿಷತ್ (ಎನ್‌ಸಿಟಿಇ) ನಿರ್ದೇಶನ ನೀಡಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಬಯೊಮೆಟ್ರಿಕ್ ಹಾಜರಾತಿ ಕಡ್ಡಾಯ ಎಂದು ತಿಳಿಸಿದೆ.
ಈ ನಿರ್ದೇಶನವನ್ನು ಜಾರಿಗೆ ತಾರದ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎನ್‌ಸಿಟಿಇ ಎಚ್ಚರಿಕೆ ನೀಡಿದೆ. ಹಾಜರಾತಿ ಮಾಹಿತಿಯನ್ನು ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಪ್ರತಿ ವಾರ ಇದನ್ನು ಪರಿಷ್ಕರಿಸಬೇಕು. ಎನ್‌ಸಿಟಿಇ ನಿಯೋಜಿಸಿದ ಅಧಿಕಾರಿಯು ಹಾಜರಾತಿಯ ಮೇಲೆ ನಿಯಮಿತ ನಿಗಾ ಇರಿಸಲು ಇದರಿಂದ ಸಾಧ್ಯವಾಗಲಿದೆ ಎಂದು ಹೇಳಿದೆ.
ಶಿಕ್ಷಕ ಶಿಕ್ಷಣಕ್ಕೆ ಸೇರ್ಪಡೆಯಾದ ವಿದ್ಯಾರ್ಥಿಗಳ ಹಾಜರಾತಿ ಮೇಲೆ ಮಾನ್ಯತೆ ನೀಡಿದ ಸಂಸ್ಥೆಗಳು ಅಥವಾ ವಿಶ್ವವಿದ್ಯಾಲಯಗಳು ನಿಗಾ ಇರಿಸುತ್ತಿಲ್ಲ ಎಂಬುದು ಎನ್‌ಸಿಟಿಇ ಗಮನಕ್ಕೆ ಬಂದಿದೆ. ಹಾಗಾಗಿ, ಬಯೊಮೆಟ್ರಿಕ್ ವ್ಯವಸ್ಥೆಯನ್ನು ಕಡ್ಡಾಯ ಮಾಡಲಾಗಿದೆ ಎಂದು ನಿರ್ದೇಶನದಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.