ನವದೆಹಲಿ : ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ಇತರ 13 ಮಂದಿ ಮೃತಪಟ್ಟ ಸೇನಾ ಹೆಲಿಕಾಪ್ಟರ್ ಅಪಘಾತದ ಕುರಿತ ತನಿಖೆಯ ವರದಿಯನ್ನು ಮುಂದಿನ ವಾರ ವಾಯುಪಡೆಯ ಕೇಂದ್ರ ಕಚೇರಿಗೆ ಸಲ್ಲಿಸಲಾಗುವುದು ಎಂದು ಈ ಬೆಳವಣಿಗೆ ಬಗ್ಗೆ ಮಾಹಿತಿ ಹೊಂದಿರುವ ಮೂಲಗಳು ಶನಿವಾರ ತಿಳಿಸಿವೆ.
ತಮಿಳುನಾಡಿನ ಕೂನೂರ್ ಬಳಿ ಡಿಸೆಂಬರ್ 8 ರಂದು ನಡೆದ ಸೇನಾ ಹೆಲಿಕಾಪ್ಟರ್ ಅಪಘಾತದ ತನಿಖೆ ಬಹುತೇಕ ಪೂರ್ಣಗೊಂಡಿದ್ದು, ಮುಂದಿನ ಕೆಲವು ದಿನಗಳಲ್ಲಿ ವರದಿಯನ್ನು ಸಲ್ಲಿಸಲು ಅಂತಿಮಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು.
ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ನೇತೃತ್ವದ ತನಿಖಾ ತಂಡವು ಮಾನವ ದೋಷ ಸೇರಿದಂತೆ ಅಪಘಾತದ ಎಲ್ಲಾ ಸಂಭವನೀಯ ಸನ್ನಿವೇಶಗಳನ್ನು ಪರಿಶೀಲಿಸಿದೆ. ಹೆಲಿಕಾಪ್ಟರ್ ಲ್ಯಾಂಡಿಂಗ್‌ಗೆ ಸಿದ್ಧತೆ ನಡೆಸುತ್ತಿದ್ದಾಗ ಸಿಬ್ಬಂದಿ ದಿಗ್ಭ್ರಮೆಗೊಂಡಿರುವ ಬಗ್ಗೆಯೂ ತಜ್ಞರು ತನಿಖೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
‘ತನಿಖಾ ತಂಡವು ಎಲ್ಲಾ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಅನುಸರಿಸಿದೆ ಎಂದು ಖಚಿತಪಡಿಸಿಕೊಳ್ಳಲು ಕಾನೂನು ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.
ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ನೇತೃತ್ವದ ತನಿಖಾ ತಂಡವು ಎಲ್ಲಾ ಸಂಭಾವ್ಯ ಕೋನಗಳಲ್ಲಿ ತನಿಖೆ ನಡೆಸುತ್ತಿದೆ. ಒಂದು ವಾರದೊಳಗೆ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ ಅವರಿಗೆ ವರದಿ ಸಲ್ಲಿಸುವ ನಿರೀಕ್ಷೆಯಿದೆ. ಆದರೆ, ತನಿಖೆ ಬಗ್ಗೆ ಯಾವುದೇ ಅಧಿಕೃತ ವಿವರಗಳು ಲಭ್ಯವಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.