ನವದೆಹಲಿ: ದೇಶದಲ್ಲಿ ಹಕ್ಕಿಜ್ವರ (ಎಚ್5ಎನ್1) ಹರಡುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳಿಗೂ ಎಚ್ಚರಿಕೆ ಸಂದೇಶ ರವಾನಿಸಿರುವ ಕೇಂದ್ರ ಸರ್ಕಾರವು, ಸಾಕುಪಕ್ಷಿಗಳು ಮತ್ತು ಕೋಳಿಗಳು ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾದರೆ ಪಶುಸಂಗೋಪನೆ ಇಲಾಖೆಗೆ ಕೂಡಲೇ ಮಾಹಿತಿ ನೀಡಬೇಕು ಎಂದು ಹೇಳಿದೆ.
ಮಾಹಿತಿ ನೀಡುವುದರಿಂದ ಹಕ್ಕಿಜ್ವರ ತಡೆಗಟ್ಟುವ ದಿಸೆಯಲ್ಲಿ ರೂಪಿಸಲಾಗಿರುವ ರಾಷ್ಟ್ರೀಯ ಕಾರ್ಯಯೋಜನೆಯನ್ನು ಜಾರಿಗೊಳಿಸಲು ಸಹಕಾರಿಯಾಗಲಿದೆ ಎಂದು ಅದು ಹೇಳಿದೆ.
ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ಮತ್ತು ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ಈ ಕುರಿತು ಮೇ 25ರಂದು ಜಂಟಿ ಸೂಚನೆ ಹೊರಡಿಸಿವೆ. ಆಂಧ್ರಪ್ರದೇಶ (ನೆಲ್ಲೂರ್ ಜಿಲ್ಲೆ), ಮಹಾರಾಷ್ಟ್ರ (ನಾಗ್ಪುರ), ಕೇರಳ (ಆಲಪ್ಪುಳ, ಕೋಟಯಂ, ಪತ್ತನಂತಿಟ್ಟ) ಮತ್ತು ಜಾರ್ಖಂಡ್ (ರಾಂಚಿ) ರಾಜ್ಯಗಳಲ್ಲಿ ಈಗಾಗಲೇ ಹಕ್ಕಿಜ್ವರದ ಪ್ರಕರಣಗಳು ವರದಿಯಾಗಿವೆ ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.
ಹಕ್ಕಿಜ್ವರ ವೈರಾಣುವು ವೇಗವಾಗಿ ಪ್ರಸರಣವಾಗುತ್ತದೆ. ಅದು ಮಾನವರಿಗೂ ತಗುಲುವ ಅಪಾಯವಿದೆ. ಅದರ ಪ್ರಸರಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕೇಂದ್ರ ಸಲಹೆ ನೀಡಿದೆ.
ಹಕ್ಕಿಜ್ವರದ ಲಕ್ಷಣ, ಕಾಯಿಲೆ ಸ್ವರೂಪದ ಕುರಿತು ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಬೇಕು. ಮೃಗಾಲಯಗಳು, ಕೋಳಿ ಸಾಕಣೆ ಕೇಂದ್ರಗಳು, ಮಾರುಕಟ್ಟೆ ಮತ್ತಿತರ ಸ್ಥಳಗಳಲ್ಲಿ ಮುಂಜಾಗ್ರತೆ ವಹಿಸಬೇಕು ಎಂದೂ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಸಲಹೆ ನೀಡಲಾಗಿದೆ.
ಹಕ್ಕಿಜ್ವರ ಎಂದರೇನು?
ಎಚ್5ಎನ್1 ವೈರಾಣು ‘ಎ’ ಮಾದರಿಯ ಉಪಮಾದರಿಯಾಗಿದ್ದು ಅದು ಹಕ್ಕಿಗಳನ್ನು ಬಾಧಿಸುತ್ತದೆ ಮತ್ತು ಏವಿಯನ್ ಇನ್‌ಫ್ಲುಯೆನ್ಜಾಕ್ಕೆ (ಹಕ್ಕಿಜ್ವರ) ಕಾರಣವಾಗುತ್ತದೆ. ಇನ್‌ಫ್ಲುಯೆನ್ಜಾ ವೈರಾಣುಗಳ ವಂಶವಾಹಿ ಸಂರಚನೆಯು ವಿವಿಧ ಬಗೆಯ ಹೆಮಗ್ಲುಟಿನಿನ್ (ಎಚ್) ಮತ್ತು ನ್ಯೂರಾಮಿನೈಡೇಸ್ (ಎನ್) ಎಂಬ ಪ್ರೋಟಿನ್‌ಗಳಿಂದ ಆಗಿರುತ್ತದೆ.
ಎಚ್5ಎನ್1 ವೈರಾಣುವು ಎಚ್ ಪ್ರೊಟೀನ್‌ನ 5ನೇ ಮಾದರಿ ಮತ್ತು ಎನ್ ಪ್ರೊಟೀನ್‌ನ 1ನೇ ಮಾದರಿಯಿಂದ ಆಗಿರುತ್ತದೆ. 2006ರಿಂದ ಭಾರತದಲ್ಲೂ ಹಕ್ಕಿಜ್ವರ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಈ ವರ್ಷದ ಮಾರ್ಚ್ ತಿಂಗಳಿನಿಂದಲೂ ಹಕ್ಕಿಜ್ವರದ ಪ್ರಸರಣ ಕುರಿತು ಜಾಗತಿಕ ಮಟ್ಟದಲ್ಲಿ ಆತಂತ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.