ADVERTISEMENT

ಬಿಜೆಪಿ ಅನಕ್ಷರಸ್ಥರ ಪಕ್ಷ: ಕೇಂದ್ರ ಸರ್ಕಾರದ ವಿರುದ್ಧ ಸಿಸೋಡಿಯಾ ವಾಗ್ದಾಳಿ

ಪಿಟಿಐ
Published 27 ಆಗಸ್ಟ್ 2022, 14:08 IST
Last Updated 27 ಆಗಸ್ಟ್ 2022, 14:08 IST
   

ನವದೆಹಲಿ:ಬಿಜೆಪಿಯು ಅನಕ್ಷರಸ್ಥರ ಪಕ್ಷವಾಗಿದ್ದು, ದೇಶವೂ ಅವರಂತೆಯೇ ಉಳಿಯಬೇಕು ಎಂದು ಅದರ ನಾಯಕರು ಬಯಸುತ್ತಿದ್ದಾರೆ ಎಂದುದೆಹಲಿ ಉಪಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವ ಮನೀಶ್‌ ಸಿಸೋಡಿಯಾ ವಾಗ್ದಾಳಿ ನಡೆಸಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಹೆಚ್ಚುವರಿಯಾಗಿ ನಿರ್ಮಾಣ ಮಾಡಲಾಗಿರುವ ಕಟ್ಟಡಗಳಿಗೆ ಸಂಬಂಧಿಸಿದಂತೆ ಕೇಂದ್ರ ಜಾಗೃತ ಆಯೋಗದ (ಸಿವಿಸಿ) ವಿಚಾರಣೆಗೆ 2 ವರ್ಷಕ್ಕೂ ಹೆಚ್ಚು ಸಮಯ ವಿಳಂಬವಾಗಿರುವ ಬಗ್ಗೆಗವರ್ನರ್‌ ವಿ.ಕೆ. ಸಕ್ಸೇನಾ ಅವರು ದೆಹಲಿ ಸರ್ಕಾರ ಮುಖ್ಯಕಾರ್ಯದರ್ಶಿಯವರಿಂದ ವರದಿ ಕೇಳಿದ್ದಾರೆ ಎಂದು ವರದಿಗಳು ಪ್ರಕಟವಾಗಿವೆ.

ಈ ನಡುವೆ ಮಾಧ್ಯಮಗೋಷ್ಠಿ ನಡೆಸಿರುವಸಿಸೋಡಿಯಾ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ADVERTISEMENT

'ಬಿಜೆಪಿಯು ಅನಕ್ಷರಸ್ಥರ ಪಕ್ಷವಾಗಿದ್ದು, ದೇಶವೂ ಅನಕ್ಷರಸ್ಥವಾಗಿಯೇ ಉಳಿಯಲಿ ಎಂದು ಬಯಸುತ್ತಿದೆ. ಅವರದ್ದೇ (ಬಿಜೆಪಿ ಆಡಳಿತವಿರುವ) ರಾಜ್ಯಗಳಲ್ಲಿ ಬಿಜೆಪಿಯು ಸಾಕಷ್ಟು ಸರ್ಕಾರಿ ಶಾಲೆಗಳನ್ನು ಮುಚ್ಚಿದೆ. ತಮ್ಮದೇ ಆಡಳಿತದಲ್ಲಿ ಹಲವು ಸರ್ಕಾರಿ ಶಾಲೆಗಳನ್ನು ಮುಚ್ಚಿದ್ದು ಏಕೆ ಎಂದು ಅವರು ತನಿಖೆ ನಡೆಸಲಿ' ಎಂದು ಚಾಟಿ ಬೀಸಿದ್ದಾರೆ.

ಅಬಕಾರಿ ನೀತಿಗೆ ಸಂಬಂಧಿಸಿದ ತನಿಖೆಯ ಭಾಗವಾಗಿ ತಮ್ಮ ನಿವಾಸದಲ್ಲಿ ತನಿಖಾ ಸಂಸ್ಥೆಗಳಿಂದ ಶೋಧ ಕಾರ್ಯಾಚರಣೆ ನಡೆಸಿದ್ದರ ಹೊರತಾಗಿಯೂ, ಯಾವುದೇ ದೋಷಗಳನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಸರ್ಕಾರಿ ಶಾಲೆಗಳ ವಿಚಾರವನ್ನು ಮುನ್ನೆಲೆಗೆ ತರಲಾಗುತ್ತಿದೆ ಎಂದು ಸಿಸೋಡಿಯಾ ಆರೋಪಿಸಿದ್ದಾರೆ.

'ಅವರು ಈ ಹಿಂದೆ ಮುಖ್ಯಮಂತ್ರಿ ಕಚೇರಿ ಮೇಲೆ ದಾಳಿ ನಡೆಸಿದ್ದರು. ನಮ್ಮ 40 ಶಾಸಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದರು. ಆದಾಗ್ಯೂ, ಅವರಿಗೆ ಏನೂ ಸಿಗಲಿಲ್ಲ. ಅದಾದ ಬಳಿಕ ಅಬಕಾರಿ ನೀತಿಗೆ ಸಂಬಂಧಿಸಿದ ನಕಲಿ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ನನ್ನ ಮನೆಯಲ್ಲಿ ಶೋಧ ನಡೆಸಿದರು. ಅವರಿಗೆ ಏನೂ ಸಿಗುವುದಿಲ್ಲ ಎಂಬುದು ಅರ್ಥವಾಗಿದೆ. ಹಾಗಾಗಿ ಇದೀಗ ಶಾಲೆಗಳ ವಿಚಾರವಾಗಿ ಹೊಸ ಪ್ರಯತ್ನ ನಡೆಸುತ್ತಿದ್ದಾರೆ' ಎಂದು ಬಿಜೆಪಿಗೆ ತಿವಿದಿದ್ದಾರೆ.

ದೆಹಲಿ ಸರ್ಕಾರದ ಅಬಕಾರಿ ನೀತಿ ವಿರುದ್ಧ ಟೀಕ್ರಾಪ್ರಹಾರ ನಡೆಸಿದ್ದ ಬಿಜೆಪಿ,ಅರವಿಂದ ಕೇಜ್ರಿವಾಲ್‌ ನೇತೃತ್ವದ ಎಎಪಿ ಸರ್ಕಾರವು ರಾಷ್ಟ್ರ ರಾಜಧಾನಿಯಲ್ಲಿ ಶಾಲೆಗಳು ಮತ್ತು ಆಸ್ಪತ್ರೆಗಳಿಗಿಂತ ಹೆಚ್ಚು ಮದ್ಯದ ಅಂಗಡಿಗಳನ್ನು ತೆರೆದಿದೆ ಎಂದು ಆರೋಪಿಸಿತ್ತು. ಅಷ್ಟಲ್ಲದೆ, ದೆಹಲಿಯ ಯಶಸ್ವಿ ಶೈಕ್ಷಣಿಕ ಮಾದರಿ ಬಗ್ಗೆ 'ನ್ಯೂಯಾರ್ಕ್‌ ಟೈಮ್ಸ್‌' ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾದ ಸುದ್ದಿಯು ಹಣ ಕೊಟ್ಟ ಬರೆಸಿರುವುದು ಎಂದು ಟೀಕಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.