ADVERTISEMENT

ಮತಗಟ್ಟೆ ಸುತ್ತ ಪಕ್ಷಗಳ ಚಿತ್ತ

ಹಿಂದುತ್ವದ ಮೊರೆ ಹೋಗುವ ಸುಳಿವು ಕೊಟ್ಟ ಬಿಜೆಪಿ ಕ್ರಿಯಾ ಯೋಜನೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2018, 19:30 IST
Last Updated 16 ಸೆಪ್ಟೆಂಬರ್ 2018, 19:30 IST
ಕಾರ್ಯಕಾರಿ ಸಮಿತಿ ಸಭೆ –ಸಾಂದರ್ಭಿಕ ಚಿತ್ರ
ಕಾರ್ಯಕಾರಿ ಸಮಿತಿ ಸಭೆ –ಸಾಂದರ್ಭಿಕ ಚಿತ್ರ   

ನವದೆಹಲಿ: ಸಂಘ ಪರಿವಾರದ ಸಂಘಟನೆಗಳು, ಮಠಗಳು, ದೇವಾಲಯಗಳು ಮತ್ತು ಆಶ್ರಮಗಳ ಮುಖ್ಯಸ್ಥರ ಜತೆಗೆ ನಿರಂತರ ಸಂಪರ್ಕದಲ್ಲಿರುವುದು 2019ರ ಲೋಕಸಭಾ ಚುನಾವಣೆಗಾಗಿ ಬಿಜೆಪಿ ಅಭಿವೃದ್ಧಿಪಡಿಸಿರುವ 24 ಅಂಶಗಳ ಕ್ರಿಯಾ ಯೋಜನೆಯ ಭಾಗವಾಗಿದೆ.

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಹಿಂದುತ್ವದ ಮೊರೆ ಹೋಗುವುದು ಖಚಿತ ಎಂಬ ಸುಳಿವನ್ನು ಈ ಕ್ರಿಯಾ ಯೋಜನೆ ನೀಡಿದೆ. ಜತೆಗೆ, ಹಿಂದುಳಿದ ವರ್ಗಗಳು ಮತ್ತು ದಲಿತ ಸಮುದಾಯಗಳನ್ನು ಆಕರ್ಷಿಸುವ ಲೆಕ್ಕಾಚಾರವನ್ನೂ ಹಾಕಿಕೊಂಡಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಯ್ದೆಯನ್ನು ಸುಪ್ರೀಂ ಕೋರ್ಟ್‌ ‘ದುರ್ಬಲ’ಗೊಳಿಸಿದಾಗ ಅದನ್ನು ತಡೆಯಲು ಕೇಂದ್ರ ಸರ್ಕಾರವು ತಕ್ಷಣವೇ ಕ್ರಮ ಕೈಗೊಂಡಿದೆ. ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ (ಎನ್‌ಸಿಬಿಸಿ) ಸಾಂವಿಧಾನಿಕ ಮಾನ್ಯತೆ ನೀಡಲಾಗಿದೆ. ಇದು ಈ ಸಮುದಾಯಗಳ ಬಗ್ಗೆ ಬಿಜೆಪಿ ಹೊಂದಿರುವ ಬದ್ಧತೆಯನ್ನು ತೋರಿಸುತ್ತದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಬೇಕು ಎಂಬುದೂ ಬಿಜೆಪಿಯ ಕಾರ್ಯತಂತ್ರದ ಭಾಗವಾಗಿದೆ.

ADVERTISEMENT

ಮತಗಟ್ಟೆ ಪ್ರದೇಶದ ಸಾಮಾಜಿಕ ರಚನೆಗೆ ಅನುಗುಣವಾಗಿಯೇ ಮತಗಟ್ಟೆ ಸಮಿತಿ ರಚನೆಯಾಗಬೇಕು ಎಂದು ಕ್ರಿಯಾ ಯೋಜನೆಯಲ್ಲಿ ಹೇಳಲಾಗಿದೆ. ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಮುಲಾಯಂ ಸಿಂಗ್‌ ಯಾದವ್‌, ಅಖಿಲೇಶ್‌ ಯಾದವ್‌ ಮತ್ತು ಮಾಯಾವತಿ ಅವರು ಜಾತಿ ಆಧಾರದಲ್ಲಿ ಮತ ಗಳಿಸುವ ತಂತ್ರ ಮಾಡುತ್ತಾರೆ. ಇದು ಬಿಜೆಪಿಗೆ ದೊಡ್ಡ ಸವಾಲಾಗಿದೆ. ಹಾಗಾಗಿ, ಮತಗಟ್ಟೆ ಮಟ್ಟದಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ವರ್ಗಗಳನ್ನು ಪಕ್ಷಕ್ಕೆ ಸೇರಿಸಲು ನಿರ್ಧರಿಸಲಾಗಿದೆ.

ತಂತ್ರಜ್ಞಾನದ ಗರಿಷ್ಠ ಬಳಕೆ ಬಿಜೆಪಿಯ ಇನ್ನೊಂದು ಕಾರ್ಯತಂತ್ರ. ಸ್ಮಾರ್ಟ್‌ ಫೋನ್‌ ಹೊಂದಿರುವವರನ್ನು ಗುರುತಿಸಬೇಕು ಮತ್ತು ಅವರನ್ನು ಸೇರಿಸಿ ಮತಗಟ್ಟೆ ಮಟ್ಟದಲ್ಲಿ ಒಂದು ವಾಟ್ಸ್ಆ್ಯಪ್‌ ಗುಂಪು ರಚಿಸಬೇಕು ಎಂದು ಉತ್ತರ ಪ್ರದೇಶದ ಸ್ಥಳೀಯ ಮುಖಂಡರಿಗೆ ಸೂಚಿಸಲಾಗಿದೆ.

ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿ ಆರು ಕಾರ್ಯಕ್ರಮಗಳನ್ನು ಏರ್ಪಡಿಸಲು ಸಲಹೆ ನೀಡಲಾಗಿದೆ. ಇದಕ್ಕಾಗಿ ಮತಗಟ್ಟೆ ಉಸ್ತುವಾರಿಯೊಬ್ಬರನ್ನು ನೇಮಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿಯವರ ‘ಮನದ ಮಾತು’ ಬಾನುಲಿ ಕಾರ್ಯಕ್ರಮವನ್ನು ಜನರು ಆಲಿಸುವಂತೆ ಮಾಡುವುದು ಕೂಡ ಮತಗಟ್ಟೆ ಉಸ್ತುವಾರಿಯ ಜವಾಬ್ದಾರಿಯಾಗಿದೆ.

ಸರ್ಕಾರದ ಯೋಜನೆಗಳ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸುವುದು ಇನ್ನೊಂದು ಕಾರ್ಯತಂತ್ರ. ಅವರನ್ನು ‘ವಿಕಾಸ ದೂತ’ ಎಂದು ಪರಿಗಣಿಸಿ, ಅವರ ಮೂಲಕ ಪಕ್ಷದ ಪರವಾದ ಸಂದೇಶ ಹರಡಲು ಯತ್ನಿಸಲಾಗುವುದು.

ಕಳೆದ ಎರಡು ಲೋಕಸಭೆ ಮತ್ತು ಎರಡು ವಿಧಾನಸಭೆ ಚುನಾವಣೆಗಳ ಮತ ಚಲಾವಣೆ ಮಾಹಿತಿಯನ್ನು ಮತಗಟ್ಟೆ ನಿರ್ವಾಹಕರು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಿಂದ ಪಡೆದುಕೊಳ್ಳಬೇಕು. ಈ ಮಾಹಿತಿಯನ್ನು ವಿಶ್ಲೇಷಿಸಿ ಪಕ್ಷದ ಶಕ್ತಿ ಮತ್ತು ದೌರ್ಬಲ್ಯ ಏನು ಎಂಬುದನ್ನು ಗುರುತಿಸಬೇಕು ಎಂದೂ ಕಾರ್ಯಸೂಚಿಯಲ್ಲಿ ಹೇಳಲಾಗಿದೆ.

* ಪ್ರತಿ ಮತಗಟ್ಟೆಯಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ವರ್ಗಗಳ 20 ಹೊಸ ಸದಸ್ಯರ ಸೇರ್ಪಡೆಗೆ ನಿರ್ಧಾರ

* ಪ್ರತಿ ಪ್ರದೇಶದಲ್ಲಿ ಸ್ವಸಹಾಯ ಗುಂಪುಗಳ 2–3 ಸದಸ್ಯರನ್ನು ಬಿಜೆಪಿ ಸದಸ್ಯರಾಗಿ ನೋಂದಣಿ

* ಪ್ರತಿ ಮತಗಟ್ಟೆ ಪ್ರದೇಶದಲ್ಲಿ ಬೈಕ್‌ ಹೊಂದಿರುವ ಐವರು ಯುವಕರ ಪ‍ಟ್ಟಿ ತಯಾರಿ

ಒಂದು ಕೋಟಿ ಮತಗಟ್ಟೆ ಸಹಾಯಕರ ನೇಮಕ: ಕಾಂಗ್ರೆಸ್‌ ಕಾರ್ಯತಂತ್ರ

ಪಿಟಿಐ ವರದಿ: ಮತಗಟ್ಟೆಗಳ ಪರಿಣಾಮಕಾರಿ ನಿರ್ವಹಣೆಗಾಗಿ ಒಂದು ಕೋಟಿ ಮತಗಟ್ಟೆ ಸಹಾಯಕರನ್ನು ನೇಮಿಸಲು ಕಾಂಗ್ರೆಸ್‌ ನಿರ್ಧರಿಸಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಈ ಯೋಜನೆಗೆ ಹಸಿರು ನಿಶಾನೆ ತೋರಿದ್ದಾರೆ. ಪ್ರಧಾನ ಕಾರ್ಯದರ್ಶಿ ಅಶೋಕ್‌ ಗೆಹ್ಲೋಟ್‌ ಅವರು ಪಕ್ಷದ ರಾಜ್ಯ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಪತ್ರ ಬರೆದು ಮತಗಟ್ಟೆ ಸಹಾಯಕರ ನೇಮಕದ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಪಕ್ಷದ ಜಿಲ್ಲೆ ಮತ್ತು ತಾಲೂಕು ಘಟಕಗಳ ನೆರವಿನೊಂದಿಗೆ ಪ್ರತಿ ಮತಗಟ್ಟೆಯಲ್ಲಿ 10 ಮಂದಿ ಸಹಾಯಕರನ್ನು ನೇಮಿಸಲು ತಿಳಿಸಲಾಗಿದೆ. ಒಬ್ಬೊಬ್ಬ ಮತಗಟ್ಟೆ ಸಹಾಯಕ 20–25 ಮನೆಗಳಿಗೆ ಭೇಟಿ ನೀಡಬೇಕು. ಮಧ್ಯಪ್ರದೇಶ ಮತ್ತು ಇತರ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಮೊದಲೇ ಮತಗಟ್ಟೆ ಸಹಾಯಕರ ನೇಮಕವನ್ನು ಪೂರ್ಣಗೊಳಿಸಲು ಕಾಂಗ್ರೆಸ್‌ ಸಜ್ಜಾಗಿದೆ.

ದೇಶದಾದ್ಯಂತ 10 ಲಕ್ಷಕ್ಕೂ ಹೆಚ್ಚು ಮತಗಟ್ಟೆಗಳಿವೆ. ಒಂದೊಂದು ಮತಗಟ್ಟೆಗೆ 10 ಸಹಾಯಕರಂತೆ ಒಂದು ಕೋಟಿ ಸಹಾಯಕರನ್ನು ನೇಮಿಸಬೇಕಾಗಿದೆ

ಜೆ.ಡಿ. ಸಲೀಂ,ಕಾಂಗ್ರೆಸ್‌ನ ಸಂಘಟನಾ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.