ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿರುವ ‘ನಮೋ ಟೀವಿ’ಯನ್ನು ನಾವೇ ನಿರ್ವಹಿಸುತ್ತಿದ್ದೇವೆ ಎಂದು ಬಿಜೆಪಿಯ ಐಟಿ ವಿಭಾಗ ಒಪ್ಪಿಕೊಂಡಿದೆ. ‘ನಮೋ ಆ್ಯಪ್‌ನ ಭಾಗವಾಗಿರುವ ನಮೋ ಟೀವಿಯನ್ನು ಬಿಜೆಪಿಯ ಐಟಿ ವಿಭಾಗ ನಿರ್ವಹಿಸುತ್ತಿದೆ. ಡಿಟಿಎಚ್‌ನಲ್ಲಿ ನಮೋ ಟೀವಿಯ ಪ್ರಸಾರಕ್ಕಾಗಿ ನಾವು ಸ್ಲಾಟ್ ಖರೀದಿಸಿದ್ದೇವೆ’ ಎನ್ನುವ ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರ ಹೇಳಿಕೆಯಲ್ಲಿ ‘ಇಂಡಿಯನ್ ಎಕ್ಸ್‌ಪ್ರೆಸ್’ ಗುರುವಾರ ವರದಿ ಮಾಡಿದೆ.
ದೆಹಲಿಯ ಮಾಧ್ಯಮ ಪ್ರಮಾಣ ಮತ್ತು ನಿಗಾವಣೆ ಸಂಸ್ಥೆಯು (ಎಂಸಿಎಂಸಿ) ನಮೋ ಟೀವಿಯ ಚಿಹ್ನೆಯನ್ನು (ಲೊಗೊ) ಮಾತ್ರ ಪ್ರಮಾಣೀಕರಿಸಿದೆ ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ಹೆಸರು ಹೇಳಲು ಇಚ್ಛಿಸದ ಅಧಿಕಾರಿಗಳನ್ನು ಉಲ್ಲೇಖಿಸಿ ಹೇಳಿದೆ. ‘ಈಗ ಆ್ಯಪ್‌ನಲ್ಲಿ ಪ್ರಸಾರವಾಗುತ್ತಿರುವ ನರೇಂದ್ರ ಮೋದಿ ಅವರ ರೆಕಾರ್ಡೆಡ್ ಭಾಷಣಗಳು ಜಾಹೀರಾತುಗಳಲ್ಲ. ಚುನಾವಣಾ ಆಯೋಗಕ್ಕೆ ಇಂಥ ವಿಷಯಗಳನ್ನು ಪ್ರಮಾಣೀಕರಿಸುವ ಅಧಿಕಾರವೂ ಇಲ್ಲ’ ಎಂದು ಸಂಸ್ಥೆಯ ಉನ್ನತ ಅಧಿಕಾರಿಗಳು ಹೇಳಿದ್ದಾರೆ.
‘ನಾವು ನಮ್ಮ ಪ್ರತಿಕ್ರಿಯೆಯನ್ನು ಚುನಾವಣಾ ಆಯೋಗಕ್ಕೆ ಕಳಿಸಿದ್ದೇವೆ. ಕೇವಲ ಲೊಗೊ ಮಾತ್ರ ನಾವು ಪ್ರಮಾಣಿಕರಿಸಿದ್ದೆವು. ಪ್ರಮಾಣೀಕರಣಕ್ಕಾಗಿ ನಮಗೆ ಕಳಿಸಿದ್ದ ಕಂಟೆಂಟ್ ನಮೋ ಟೀವಿಗಾಗಿ ಮಾತ್ರವೇ ಸೀಮಿತವಾಗಿರಲಿಲ್ಲ. ಅದನ್ನು ಟೀವಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡಲೆಂದು ಬಿಜೆಪಿ ಕಳಿಸಿತ್ತು. ಅದು ಜಾಹೀರಾತು ಎಂದು ಕರೆಸಿಕೊಳ್ಳುವುದಿಲ್ಲ ಎನ್ನುವ ಕಾರಣಕ್ಕಾಗಿ ಅದನ್ನು ನಾವು ಪ್ರಮಾಣೀಕರಿಸಲಿಲ್ಲ’ ಎಂದು ಅಧಿಕಾರಿಗಳು ಹೇಳಿದ್ದಾರೆ.
‘ಉದಾಹರಣೆಗೆ ಮೋದಿ ಈಗಾಗಲೇ ಸಂಸತ್ತಿನಲ್ಲಿ ಭಾಷಣ ಮಾಡಿರುವುದು ಅಥವಾ ರಜತ್ ಶರ್ಮಾ ಅವರ ಕಾರ್ಯಕ್ರಮ ‘ಆಪ್ ಕಿ ಅದಾಲತ್’ನಲ್ಲಿ ಪಾಲ್ಗೊಂಡಿದ್ದರೆ ಆ ಕಂಟೆಂಟ್ ಈಗಾಗಲೇ ಸಾರ್ವಜನಿಕರಿಗೆ ಲಭ್ಯವಾಗುವಂತೆ (ಪಬ್ಲಿಕ್ ಡೊಮೆನ್) ಇರುತ್ತವೆ. ಅದರಲ್ಲಿ ಹೊಸತೇನೂ ಇಲ್ಲ. ಹೀಗಾಗಿಯೇ ‘ಇದು ಜಾಹೀರಾತಲ್ಲ’ ಎನ್ನುವ ಕಾರಣಕ್ಕೆ ನಾವು ಬಿಜೆಪಿಯ ಕೋರಿಕೆಯನ್ನು ತಳ್ಳಿಹಾಕಿದೆವು’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
‘ನಮೋ ಟೀವಿಯ ಲೋಗೊ ಮತ್ತು ಕಂಟೆಂಟ್ ಪ್ರಮಾಣೀಕರಣಕ್ಕಾಗಿ ಬಿಜೆಪಿಯ ರಾಷ್ಟ್ರೀಯ ಚುನಾವಣಾ ಸಮಿತಿ ಸದಸ್ಯ ನೀರಜ್ ಕುಮಾರ್ ಅರ್ಜಿ ಸಲ್ಲಿಸಿದ್ದರು. ಬಿಜೆಪಿ ಐಟಿ ಘಟಕದ ಭಾಗವಾಗಿರುವ ನೀರಜ್ ಕುಮಾರ್ ಪಕ್ಷದ ವತಿಯಿಂದ ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ವ್ಯವಹಾರಗಳ ಉಸ್ತುವಾರಿಯನ್ನೂ ನಿರ್ವಹಿಸುತ್ತಿದ್ದಾರೆ’ ಎಂದು ದೆಹಲಿ ಚುನಾವಣಾ ಆಯೋಗದಲ್ಲಿರುವ ಹೆಸರು ಹೇಳಲು ಇಚ್ಛಿಸದ ಅಧಿಕಾರಿ ಹೇಳಿದ್ದಾರೆ.
ಚುನಾವಣಾ ಆಯೋಗದ ನೋಟಿಸ್‌ಗೆ ಪ್ರತಿಕ್ರಿಯಿಸಿರುವ ಮಾಹಿತಿ ಮತ್ತು ಪ್ರಸಾರ ಇಲಾಖೆಯು, ದೇಶದ ಬಹುತೇಕ ಪ್ರಮುಖ ಡಿಟಿಎಚ್ ಸೇವೆಗಳಲ್ಲಿ ಲಭ್ಯವಿರುವ ನಮೋ ಟೀವಿಯನ್ನು ‘ಪ್ಲಾಟ್‌ಫಾರ್ಮ್ ಸರ್ವೀಸ್’ ಎಂದು ಹೇಳಿದೆ. ನಮೋ ಟೀವಿಯನ್ನು ಡಿಟಿಎಚ್ ಆಪರೇಟರ್‌ಗಳು ಪ್ಲಾಟ್‌ಫಾರ್ಮ್ ಸರ್ವೀಸ್ ಆಗಿ ನೀಡುವುದರಿಂದ ಅದಕ್ಕೆ ಅಪ್‌ಲಿಂಕಿಂಗ್ ಅಥವಾ ಡೌನ್‌ಲಿಂಕಿಂಗ್ ಅನುಮತಿ ಪಡೆದುಕೊಳ್ಳುವ ಅಗತ್ಯವಿಲ್ಲ. ಹೀಗಾಗಿ ನಮೋ ಟೀವಿ ನಮ್ಮ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ. ಚುನಾವಣಾ ಆಯೋಗವೇ ಇದಕ್ಕೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮಾಹಿತಿ ಮತ್ತು ಪ್ರಸಾರ ಇಲಾಖೆ ಹೇಳಿತ್ತು.
‘ಮಾಹಿತಿ ಮತ್ತು ಪ್ರಸಾರ ಇಲಾಖೆಯಿಂದ ನಮೋ ಟೀವಿ ಅನುಮತಿ ಪಡೆದಿದೆಯೇ? ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ರಾಜಕೀಯ ಪಕ್ಷಗಳು ಟೀವಿ ಚಾನೆಲ್‌ಗಳನ್ನು ಆರಂಭಿಸಬಹುದೇ’ ಎಂದು ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ ಸೇರಿದಂತೆ ಹಲವು ಪಕ್ಷಗಳು ಚುನಾವಣಾ ಆಯೋಗವನ್ನು ಪ್ರಶ್ನಿಸಿದ್ದವು. ನೀತಿ ಸಂಹಿತೆ ಜಾರಿಯಾದ ನಂತರ, ಬಹಿರಂಗ ಪ್ರಚಾರಕ್ಕೆ ಅವಕಾಶ ಇಲ್ಲದ ಅವಧಿಯಲ್ಲೂ ನಮೋ ಟೀವಿ ಲಕ್ಷಾಂತರ ಮನೆಗಳಲ್ಲಿ ಬಿತ್ತರಗೊಳ್ಳುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.