ADVERTISEMENT

ಸಾಮಾಜಿಕ ಅಸಮಾನತೆ, ಅಪರಾಧ ಹಿನ್ನೆಲೆಯವರಿಂದ ಕೂಡಿದ ಬಿಹಾರ ಸಂಪುಟ: ಬಿಜೆಪಿ ಟೀಕೆ

ಪಿಟಿಐ
Published 16 ಆಗಸ್ಟ್ 2022, 14:10 IST
Last Updated 16 ಆಗಸ್ಟ್ 2022, 14:10 IST
ಸಚಿವರ ಜತೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ – ಐಎಎನ್‌ಎಸ್ ಚಿತ್ರ
ಸಚಿವರ ಜತೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ – ಐಎಎನ್‌ಎಸ್ ಚಿತ್ರ   

ಪಟ್ನಾ: ಬಿಹಾರದ ಮಹಾ ಮೈತ್ರಿಕೂಟ ಸರ್ಕಾರದ ನೂತನ ಸಚಿವ ಸಂಪುಟದಲ್ಲಿ ಅಪರಾಧ ಹಿನ್ನೆಲೆಯುಳ್ಳವರು ಹೆಚ್ಚಿದ್ದಾರೆ. ಸಂಪುಟವು ಸಾಮಾಜಿಕ ಅಸಮಾನತೆಯಿಂದ ಕೂಡಿದೆ ಎಂದು ಬಿಜೆಪಿ ಟೀಕಿಸಿದೆ.

ಸಚಿವ ಸಂಪುಟದಲ್ಲಿ ಕೇವಲ ಎರಡು ಸಮುದಾಯಗಳ ಪ್ರತಿನಿಧಿಗಳಿಗೆ ಶೇ 33ಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ನೀಡಲಾಗಿದೆ ಎಂದು ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ. ಯಾದವರು ಮತ್ತು ಮುಸ್ಲಿಮರನ್ನು ಉದ್ದೇಶಿಸಿ ಅವರು ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಈ ಸಮುದಾಯಗಳ 13 ಮಂದಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನ ನೀಡಲಾಗಿದೆ. ಇದರಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿ(ಯು) ಹಾಗೂ ಕಾಂಗ್ರೆಸ್‌ನವರೂ ಇದ್ದಾರೆ.

ನೂತನ ಸಚಿವರಾದ ಲಲಿತ್ ಯಾದವ್, ಸುರೇಂದ್ರ ಯಾದವ್, ರಮಾನಂದ್ ಯಾದವ್ ಹಾಗೂ ಕಾರ್ತಿಕೇಯ ಸಿಂಗ್ ಗಂಭೀರ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದೂ ಮೋದಿ ಆರೋಪಿಸಿದ್ದಾರೆ.

ADVERTISEMENT

ತೆಲಿಸ್ ಮತ್ತು ಕಾಯಸ್ಥಾ ಸಮುದಾಯಗಳವರಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ಸಚಿವ ಸಂಪುಟಕ್ಕೆ ಹೋಲಿಸಿದರೆ ಹಾಲಿ ಸಂಪುಟದಲ್ಲಿ ರಜಪೂತರ ಸಂಖ್ಯೆಯೂ ಕಡಿಮೆಯಾಗಿದೆ ಎಂದು ಅವರು ದೂರಿದ್ದಾರೆ.

‘ಇಂಥ ಸಾಮಾಜಿಕ ಅಸಮತೋಲನ ಮತ್ತು ಅಪರಾಧ ಹಿನ್ನೆಲೆಯಿಂದ ಕೂಡಿದ ಸಚಿವ ಸಂಪುಟ ರಚಿಸುವುದರ ಹಿಂದಿನ ನಿತೀಶ್ ಕುಮಾರ್ ಅವರ ತರ್ಕವೇನು ಎಂಬ ಬಗ್ಗೆ ಅಚ್ಚರಿಯಾಗಿದೆ’ ಎಂದು ಮೋದಿ ಹೇಳಿದ್ದಾರೆ.

ನಿತೀಶ್‌ ಕುಮಾರ್‌ ಮತ್ತು ಆರ್‌ಜೆಡಿಯ ತೇಜಸ್ವಿ ಯಾದವ್‌ ನೇತೃತ್ವದಲ್ಲಿ ರಚನೆಯಾಗಿರುವ ಬಿಹಾರ ಸರ್ಕಾರದ ನೂತನ ಸಚಿವರಾಗಿ 31 ಮಂದಿ ಮಂಗಳವಾರ ಬೆಳಿಗ್ಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆರ್‌ಜೆಡಿಗೆ ಸಚಿವ ಸ್ಥಾನದಲ್ಲಿ ಸಿಂಹಪಾಲು ದೊರೆತಿದೆ. ಇದರ ಬೆನ್ನಲ್ಲೇ ಬಿಜೆಪಿ ನಿತೀಶ್ ಸಂಪುಟದ ವಿರುದ್ಧ ಟೀಕೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.