ADVERTISEMENT

ತ್ರಿಪುರಾ ಪಂಚಾಯಿತಿ ಚುನಾವಣೆ: BJP ಮಿತ್ರ ಪಕ್ಷ ತಿಪ್ರಾ ಮೋಥಾ ಏಕಾಂಗಿ ಸ್ಪರ್ಧೆ!

ಪಿಟಿಐ
Published 27 ಜೂನ್ 2024, 13:40 IST
Last Updated 27 ಜೂನ್ 2024, 13:40 IST
   

ಅಗರ್ತಲಾ: ಪಂಚಾಯಿತಿ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ಪಕ್ಷ ಸಿದ್ಧತೆ ನಡೆಸಬೇಕು ಎಂದು ತಿಪ್ರಾ ಮೋಥಾ ಮುಖ್ಯಸ್ಥ ಪ್ರದ್ಯೋತ್‌ ಕಿಶೋರ್ ಮಾಣಿಕ್ಯ ದೇವ್ ವರ್ಮಾ ಕರೆ ನೀಡಿದ್ದಾರೆ.

ಚುನಾವಣೆ ಸಂಬಂಧ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, 'ನಮ್ಮದೇ ಸ್ವಂತ ಶಕ್ತಿ ಮತ್ತು ಯೋಗ್ಯತೆಯ ಆಧಾರದಲ್ಲಿ ಪಂಚಾಯಿತಿ ಚುನಾವಣೆಗೆ ತಿಪ್ರಾ ಮೋಥಾ ಸಿದ್ಧತೆ ನಡೆಸಬೇಕು. ನಮ್ಮನ್ನು ನಾವು ಕಡಿಮೆ ಕ್ಷೇತ್ರಗಳಿಗೆ ನಿಯಂತ್ರಿಸಿಕೊಳ್ಳಲು ಸಾಧ್ಯವಿಲ್ಲ. ಸ್ವತಂತ್ರ ಚುನಾವಣೆಗೆ ಸಜ್ಜಾಗಿ. ನಾವು ಬಲಿಷ್ಠವಾಗಿದ್ದರೆ ಜನರೂ ಬೆಂಬಲ ನೀಡುತ್ತಾರೆ' ಎಂದು ಕಾರ್ಯಕರ್ತರಿಗೆ ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ತಿಪ್ರಾ ಮೋಥಾ ನಾಯಕ ಬಿಜೊಯ್‌ ಕುಮಾರ್‌, ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ADVERTISEMENT

'ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುವುದು ಮೈತ್ರಿ ಸರ್ಕಾರದ ಭಾಗವಾಗಿ ನಮ್ಮ ಜವಾಬ್ದಾರಿಯಾಗಿದೆ. ಅದರಲ್ಲಿ ವಿಫಲರಾಗುತ್ತೇವೆ ಎಂದಾದರೆ, ಮೈತ್ರಿ ಸರ್ಕಾರದಲ್ಲಿ ಉಳಿಯುವುದರಲ್ಲಿ ಅರ್ಥವೇ ಇಲ್ಲ' ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಾದೇಶಿಕ ಸಮಸ್ಯೆಗಳ ಇತ್ಯರ್ಥಕ್ಕೆ ತಿಪ್ರಾ ಮೋಥಾ ಒತ್ತು ನೀಡುತ್ತದೆ. ಆ ನಿಟ್ಟಿನಲ್ಲಿ ನಮ್ಮ ಪಕ್ಷ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವಣ ತ್ರಿಪಕ್ಷೀಯ ಮಾತುಕತೆಗಳು ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ದೂರಿದ್ದಾರೆ.

60 ಸದಸ್ಯ ಬಲದ ತ್ರಿಪುರಾ ವಿಧಾನಸಭೆಗೆ 2023ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯು 32 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಿದೆ. 13 ಕ್ಷೇತ್ರದಲ್ಲಿ ಜಯ ಗಳಿಸಿದ್ದ ತಿಪ್ರಾ ಮೋಥಾ, 2024ರ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿದೆ.

ಮೋಥಾ ನಾಯಕರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಮಿತ್‌ ರಕ್ಷಿತ್‌, ರಾಜಕೀಯ ಪಕ್ಷವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕು ಆ ಪಕ್ಷಕ್ಕೆ ಇದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.