ಮುಂಬೈ: ಮಹಾರಾಷ್ಟ್ರದಲ್ಲಿ ಮತ ದಾನದ ದಿನ ಹತ್ತಿರವಾಗುತ್ತಿರುವಂತೆ ಯೇ ರಾಜಕೀಯ ಪಕ್ಷಗಳು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿವೆ. ದೊಡ್ಡ ಮತದಾರ ವರ್ಗವಾಗಿರುವ ಮಹಿಳೆಯರಿಗೆ, ರೈತರಿಗೆ ಹಲವು ಭರವಸೆ ಗಳನ್ನು ಪ್ರಣಾಳಿಕೆಗಳಲ್ಲಿ ನೀಡಲಾಗಿದೆ.
ಆಡಳಿತಾರೂಢ ಬಿಜೆಪಿ ಹಾಗೂ ವಿರೋಧ ಪಕ್ಷಗಳ ಮೈತ್ರಿಕೂಟವಾದ ಮಹಾರಾಷ್ಟ್ರ ವಿಕಾಸ ಆಘಾಡಿ ಭಾನುವಾರ ಬಿಡುಗಡೆ ಮಾಡಿರುವ ಪ್ರಣಾಳಿಕೆಗಳಲ್ಲಿನ ಪ್ರಮುಖ ಅಂಶಗಳು ಇಲ್ಲಿವೆ:
ಬಿಜೆಪಿ: ಸಂಕಲ್ಪ ಪತ್ರ
ಲಡಕಿ ಬಹೇನ್ ಯೋಜನೆ: ಪ್ರತಿ ತಿಂಗಳು ನೀಡುವ ಹಣಕಾಸಿನ ನೆರವಿನ ಮೊತ್ತ ₹1,500 ಇರುವುದನ್ನು ₹2,100ಕ್ಕೆ ಹೆಚ್ಚಿಸುವುದು.
ರೈತರಿಗೆ ನೀಡುವ ವಾರ್ಷಿಕ ಹಣಕಾಸಿನ ನೆರವಿನ ಮೊತ್ತ ₹12 ಸಾವಿರ ಇರುವುದನ್ನು ₹15 ಸಾವಿರಕ್ಕೆ ಹೆಚ್ಚು ಮಾಡುವುದು. ಕನಿಷ್ಠ ಬೆಂಬಲ ಬೆಲೆಗೆ ಶೇ 20ರಷ್ಟು ಸಬ್ಸಿಡಿ ಒದಗಿಸುವುದು.
ಖಾಸಗಿ ವಲಯದಲ್ಲಿ ಉದ್ಯೋಗ ಸೃಷ್ಟಿ, ಕೆಲಸ ಮಾಡಬಲ್ಲವರ ಲಭ್ಯತೆ ಬಗ್ಗೆ ಕೌಶಲ ಗಣತಿ ನಡೆಸುವುದು. ಉದ್ಯೋಗ ಅವಕಾಶ ಹೆಚ್ಚಳಕ್ಕೆ ನೆರವು ನೀಡುವುದು.
ಲಖ್‌ಪತಿ ದೀದಿ ಯೋಜನೆಯನ್ನು 50 ಲಕ್ಷ ಮಹಿಳೆಯರಿಗೆ ವಿಸ್ತರಿಸುವುದು.
ರಸಗೊಬ್ಬರಗಳ ಮೇಲಿನ ಜಿಎಸ್‌ಟಿ ಮೊತ್ತವನ್ನು ರೈತರಿಗೆ ಹಿಂದಿರುಗಿಸುವುದು.
ವೃದ್ಧರಿಗೆ ಪಿಂಚಣಿ ಮೊತ್ತ ₹1,500 ಇರುವುದನ್ನು ₹2,100ಕ್ಕೆ ಹೆಚ್ಚಿಸುವುದು.
ಉದ್ಯಮಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ₹25 ಲಕ್ಷದವರೆಗೆ ಶೂನ್ಯ ಬಡ್ಡಿ ದರಕ್ಕೆ ಸಾಲ.
ರೈತರ ಸಾಲ ಮನ್ನಾ.
ಎಂಎಸ್‌ಪಿಗಿಂತ ಕಡಿಮೆ ಬೆಲೆಗೆ ಬೆಳೆ ಖರೀದಿ ಯಾದರೆ, ರೈತರಿಗೆ ಪರಿಹಾರ ನೀಡಲು ಯೋಜನೆ.
ಎಂವಿಎ: ಮಹಾರಾಷ್ಟ್ರ ನಾಮಾ
ಮಹಾಲಕ್ಷ್ಮಿ ಯೋಜನೆ: ಮಹಿಳೆಯರಿಗೆ ತಿಂಗಳಿಗೆ ₹3,000 ನೆರವು.
ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿ ಮಾತ್ರವಲ್ಲದೆ, ಪ್ರತಿ ಕುಟುಂಬಕ್ಕೆ ₹25 ಲಕ್ಷದವರೆಗೆ ಆರೋಗ್ಯ ವಿಮೆಯ ಸೌಲಭ್ಯ.
ಸಮಾನ ಅವಕಾಶಗಳನ್ನು ಖಾತರಿಪಡಿಸಲು, ಮೀಸಲಾತಿಯ ಮೇಲಿರುವ ಶೇಕಡ 50ರ ಮಿತಿಯನ್ನು ತೆಗೆಯಲು ಜಾತಿಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ ಅರಿಯುವ ಸಮೀಕ್ಷೆ.
ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ.
₹3 ಲಕ್ಷದವರೆಗಿನ ಕೃಷಿ ಸಾಲ ಮನ್ನಾ. ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದ್ದವರಿಗೆ ಹೆಚ್ಚುವರಿಯಾಗಿ ₹50 ಸಾವಿರ ನೆರವು.
ಈರುಳ್ಳಿ ಮತ್ತು ಟೊಮೆಟೊ ಬೆಳೆಗಾರರಿಗೆ ನೆರವು.
ರಾಜ್ಯ ಸರ್ಕಾರದಲ್ಲಿನ 2.5 ಲಕ್ಷ ಖಾಲಿ ಹುದ್ದೆಗಳ ಭರ್ತಿಗೆ ತಕ್ಷಣವೇ ಕ್ರಮ.
ಸರ್ಕಾರಿ ಸೇವೆಗಳಲ್ಲಿ ಗುತ್ತಿಗೆ ಆಧಾರದ ನೇಮಕಕ್ಕೆ ಅವಕಾಶ ಕಲ್ಪಿಸಿದ ಆದೇಶವನ್ನು ಹಿಂಪಡೆಯುವುದು.
ಚೈತ್ಯಭೂಮಿಯಲ್ಲಿ ಇರುವ ಬಾಬಾಸಾಹೇಬ್ ಅಂಬೇಡ್ಕರ್ ಸ್ಮಾರಕದ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಕ್ರಿಯಾಯೋಜನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.