ಜೈಪುರ: ವರ್ಷಾಂತ್ಯದಲ್ಲಿ ರಾಜಸ್ಥಾನ ವಿಧಾನಸಭೆಗೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಬಿಜೆಪಿ ಎರಡು ಪ್ರಮುಖ ಸಮಿತಿಗಳನ್ನು ರಚಿಸಿದೆ. ಆದರೆ, ಈ ಸಮಿತಿಗಳಲ್ಲಿ ಮಾಜಿ ಮುಖ್ಯಮಂತ್ರಿ, ಪಕ್ಷದ ಹಿರಿಯ ನಾಯಕಿ ವಸುಂಧರಾ ರಾಜೇ ಅವರಿಗೆ ಅವಕಾಶ ನೀಡಿಲ್ಲ.
21 ಸದಸ್ಯರ ಮೇಲ್ವಿಚಾರಣಾ ಸಮಿತಿಗೆ ಮಾಜಿ ಸಂಸದ ನಾರಾಯಣ ಪಂಚಾರಿಯಾ ಅಧ್ಯಕ್ಷರಾಗಿದ್ದರೆ, 25 ಸದಸ್ಯರಿರುವ ಪ್ರಣಾಳಿಕೆ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರಿಗೆ ವಹಿಸಲಾಗಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಈ ಸಮಿತಿಗಳನ್ನು ರಚಿಸಿದ್ದಾರೆ ಎಂದು ಪಕ್ಷದ ರಾಜ್ಯ ಘಟಕದ ಆಧ್ಯಕ್ಷ ಸಿ.ಪಿ.ಜೋಷಿ ಮತ್ತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಗುರುವಾರ ಪ್ರಕಟಿಸಿದರು.
ಪ್ರಮುಖ ಸಮಿತಿಗಳಿಗೆ ವಸುಂಧರಾ ರಾಜೇ ಅವರನ್ನು ಪರಿಗಣಿಸದಿರುವ ಕುರಿತ ಪ್ರಶ್ನೆಗೆ, ಚುನಾವಣಾ ಪ್ರಚಾರ ಸಮಿತಿಯ ಘೋಷಣೆ ಬಾಕಿ ಇದೆ. ‘ಅವರು ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ’ ಎಂದು ಅರುಣ್ ಸಿಂಗ್ ಪ್ರತಿಕ್ರಿಯಿಸಿದರು.
‘ವಸುಂಧರಾ ರಾಜೇ ಅವರು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷೆಯಾಗಿದ್ದಾರೆ. ಅವರು ದೊಡ್ಡ ಪಾತ್ರ ನಿಭಾಯಿಸಲಿದ್ದಾರೆ. ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿದ್ದವರು. ಅವರ ಬಗ್ಗೆ ನಮಗೆಲ್ಲರಿಗೂ ಗೌರವವಿದೆ’ ಎಂದು ಹೇಳಿದರು.
‘ಚುನಾವಣೆಗೆ ಪಕ್ಷದ ಕಾರ್ಯತಂತ್ರ ಸಜ್ಜಾಗಿದೆ. ಪ್ರಚಾರ ಕಾರ್ಯದಲ್ಲಿ ಪಕ್ಷದ ರಾಷ್ಟ್ರೀಯ, ರಾಜ್ಯ ನಾಯಕರು ಭಾಗಿಯಾಗಲಿದ್ದಾರೆ. ಜನರು ಮತ್ತೆ ಬಿಜೆಪಿಗೆ ಆಶೀರ್ವಾದ ಮಾಡುತ್ತಾರೆ ಎಂಬ ಪೂರ್ಣ ವಿಶ್ವಾಸವಿದೆ. ಐಸಿಹಾಸಿಕ ಗೆಲುವು ನಮ್ಮದಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.