ಭಿಲ್ವಾರ (ರಾಜಸ್ಥಾನ) : ‘ವಿಪಕ್ಷಗಳ ಮೈತ್ರಿಕೂಟವಾದ ‘ಇಂಡಿಯಾ’ ಬಗ್ಗೆ ಬಿಜೆಪಿಗೆ ಹೆದರಿಕೆ ಶುರುವಾಗಿದೆ. ಹಾಗಾಗಿಯೇ, ‘ಭಾರತ–ಇಂಡಿಯಾ’ ವಿಷಯವನ್ನು ಮುನ್ನೆಲೆಗೆ ತಂದು ದೇಶದ ಜನರನ್ನು ದಿಕ್ಕುತಪ್ಪಿಸಲು ಯತ್ನಿಸುತ್ತಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಪಾದಿಸಿದ್ದಾರೆ.
ರಾಜಸ್ಥಾನದ ವಿಧಾನಸಭೆಗೆ ವರ್ಷಾಂತ್ಯದಲ್ಲಿ ನಡೆಯಲಿರುವ ಚುನಾವಣೆ ಅಂಗವಾಗಿ ಇಲ್ಲಿ ಬುಧವಾರ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಈಗಾಗಲೇ, ಪಕ್ಷವು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ ಜೋಡೊ ಯಾತ್ರೆ ಹಮ್ಮಿಕೊಳ್ಳುವ ಮೂಲಕ ಭಾರತದ ಜೋಡಣೆಯ ಸಂದೇಶವನ್ನು ಸಾರಿದೆ ಎಂದರು.
‘ನಾವು ಭಾರತದ ಒಗ್ಗಟ್ಟಿನ ಮಹತ್ವ ಕುರಿತು ಹೇಳಿದ್ದೇವೆ. ಅದನ್ನೇ ಅವರು (ಬಿಜೆಪಿ) ಹೊಸದಾಗಿ ಹೇಳಲು ಹೊರಟಿದ್ದಾರೆ. ನಾವು ಯಾವುದಾದರೊಂದು ವಿಷಯ ಹೇಳಲು ಹೊರಟಾಗ ಅದನ್ನು ಅಪಖ್ಯಾತಿಗೊಳಿಸಲು ಯತ್ನಿಸುತ್ತಾರೆ’ ಎಂದು ಟೀಕಿಸಿದರು.
ದೇಶವು ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದರಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಉದ್ದೇಶಪೂರ್ವಕವಾಗಿಯೇ ಕೇಂದ್ರ ಸರ್ಕಾರವು ‘ಭಾರತ–ಇಂಡಿಯಾ’ ವಿಷಯವನ್ನು ಮುನ್ನೆಲೆಗೆ ತಂದಿದೆ
-ಪ್ರಿಯಾಂಕ್ ಖರ್ಗೆ ಸಚಿವ
ಮೈತ್ರಿ ಹೆಸರು ‘ಭಾರತ’ವೆಂದು ಬದಲಾಯಿಸಿ: ಶಶಿ ತರೂರ್
ನವದೆಹಲಿ: ‘ಇಂಡಿಯಾ’ ಮೈತ್ರಿಕೂಟದ ಹೆಸರನ್ನು ‘ಭಾರತ’ (ಬಿಎಚ್‌ಎಆರ್‌ಎಟಿ– ಸುಧಾರಣೆ ಸಾಮರಸ್ಯ ಮತ್ತು ಜವಾಬ್ದಾರಿಯುತ ಪ್ರಗತಿಯ ನಾಳೆಗಾಗಿ ಮೈತ್ರಿ) ಎಂದು ಬದಲಾಯಿಸಿಕೊಂಡರೆ ಹೆಸರು ಮರುನಾಮಕರಣದಲ್ಲಿ ತೊಡಗಿರುವ ಆಡಳಿತರೂಢ ಬಿಜೆಪಿಯ ಬೆಪ್ಪುತನದ ಆಟ ಕೊನೆಯಾಗಲಿದೆ’ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಸಲಹೆ ನೀಡಿದ್ದಾರೆ. ಸರ್ಕಾರ ‘ಭಾರತ–ಇಂಡಿಯಾ’ ವಿವಾದ ಸೃಷ್ಟಿಸಿದೆ. ಇದಕ್ಕೆ ವಿಪಕ್ಷಗಳು ಮೈತ್ರಿಕೂಟದ ಹೆಸರನ್ನು ‘ಭಾರತ’ ಬದಲಾವಣೆ ಮಾಡುವುದು ಉತ್ತಮ. ಆಗಷ್ಟೇ ಬಿಜೆಪಿ ನಾಯಕರು ಸುಮ್ಮನಾಗುತ್ತಾರೆ’ ಎಂದು ‘ಎಕ್ಸ್’ನಲ್ಲಿ (ಟ್ವಿಟರ್) ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.