ತಿರುವನಂತಪುರ: ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ಅನುಷ್ಠಾನದ ವಿರುದ್ಧ ಕೇರಳದಲ್ಲಿನ ಆಡಳಿತಾರೂಢ ಎಡಪಕ್ಷಗಳು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿರುವುದಕ್ಕೆ ಬಿಜೆಪಿಯು ಭಾನುವಾರ ವಾಗ್ದಾಳಿ ನಡೆಸಿದೆ. ಕೋಮು ವಿಭಜನೆಯ ಉದ್ದೇಶದಿಂದಲೇ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಿದೆ.
‘ಈ ಹಿಂದೆ ನಿರ್ದಿಷ್ಟ ಸಮುದಾಯವೊಂದು ಸಿಎಎ ವಿರೋಧಿಸಿ ಸಾರ್ವಜನಿಕ ಆಸ್ತಿಗೆ ನಷ್ಟವನ್ನುಂಟು ಮಾಡುವ ಜೊತೆಗೆ ಹಿಂಸಾಚಾರಕ್ಕೂ ಕಾರಣವಾಗಿತ್ತು. ಲೋಕಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟಗೊಳ್ಳುತ್ತಿದ್ದಂತೆ ಇದಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ವಾಪಸ್ ಪಡೆಯುವುದಾಗಿ ಎಡಪಕ್ಷ ನೇತೃತ್ವದ ಸರ್ಕಾರ ಹೇಳಿದೆ. ಇದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ. ಇದರ ವಿರುದ್ಧ ಆಯೋಗವು ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್ ಆಗ್ರಹಿಸಿದ್ದಾರೆ.
‘ಸಿಎಎ ಹೆಸರಿನಡಿ ಸುಳ್ಳನ್ನು ವ್ಯವಸ್ಥಿತವಾಗಿ ಹಬ್ಬಿಸುವ ಮೂಲಕ ಕೋಮು ಧ್ರುವೀಕರಣಕ್ಕೆ ಮುಖ್ಯಮಂತ್ರಿ ಯತ್ನಿಸುತ್ತಿದ್ದಾರೆ. ಮುಸ್ಲಿಮರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಈ ಆರೋಪಕ್ಕೆ ಆಧಾರವೇನು? ಸಿಎಎ ಯಾವುದೇ ಒಂದು ನಿರ್ದಿಷ್ಟ ಸಮುದಾಯಕ್ಕೆ ಪೌರತ್ವವನ್ನು ನಿರಾಕರಿಸುವುದಿಲ್ಲ’ ಎಂದು ಹೇಳಿದ್ದಾರೆ.
ಕಾಸರಗೋಡಿನಲ್ಲಿ ಶನಿವಾರ ಸಿಪಿಎಂ ಆಯೋಜಿಸಿದ್ದ ಸಿಎಎ ವಿರೋಧಿ ರ‍್ಯಾಲಿಯಲ್ಲಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಪಿಣರಾಯಿ, ‘ಸಂವಿಧಾನದಲ್ಲಿ ಪ್ರತಿಪಾದಿಸಿರುವ ಸಮಾನತೆಯ ಪರಿಕಲ್ಪನೆಯನ್ನು ಕಾನೂನಿನ ಮೂಲಕ ಚೂರುಚೂರು ಮಾಡಲಾಗುತ್ತಿದೆ. ಇದು ಮುಸ್ಲಿಮರನ್ನು ಗುರಿಯಾಗಿಸಿಕೊಂಡಿರುವ ಕಾನೂನು’ ಎಂದು ಗುಡುಗಿದ್ದರು.
ಕೇರಳದ ಐದು ಕಡೆ ಸಿಎಎ ವಿರೋಧಿ ರ‍್ಯಾಲಿಗಳನ್ನು ಆಡಳಿತಾರೂಢ ಎಡಪಕ್ಷಗಳು ಆಯೋಜಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.