ನವದೆಹಲಿ: ಹರಿಯಾಣ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಆಗಮನ ಮತ್ತು ಡೇರಾ ಸಚ್ಚಾ ಸೌದಾ ಪಂಥದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಯ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾ ಆರೋಪಿಸಿದ್ದಾರೆ.
‘ಕೊಲೆ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಬಾಬಾ ರಾಮ್ ರಹೀಮ್ 20 ದಿನಗಳ ಪೆರೋಲ್ ಮೇಲೆ ಜೈಲಿನಿಂದ ಹೊರಬರುವ ಸಾಧ್ಯತೆಯಿದೆ. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಈಗಾಗಲೇ ಜೈಲಿನಿಂದ ಹೊರಬಂದು ಹರಿಯಾಣ ಚುನಾವಣಾ ಪ್ರಚಾರದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಇವೆರಡು ಬಿಜೆಪಿಯ ಪೂರ್ವನಿಯೋಜಿತ ಸಂಚಿನ ಭಾಗವಾಗಿದೆ. ಆ ಮೂಲಕ ಹರಿಯಾಣದಲ್ಲಿ ಕಾಂಗ್ರೆಸ್ ಗೆಲುವಿನ ಅವಕಾಶವನ್ನು ಕಸಿದುಕೊಳ್ಳಬಹುದು ಎಂದು ಬಿಜೆಪಿ ಭಾವಿಸಿದೆ’ ಎಂದು ಅವರು ಆರೋಪಿಸಿದ್ದಾರೆ.
ಅಕ್ಟೋಬರ್ 5ರಂದು ಹರಿಯಾಣ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಬಾಬಾ ರಾಮ್ ರಹೀಮ್ ಸಿಂಗ್ 20 ದಿನಗಳ ಪೆರೋಲ್ ಕೋರಿದ್ದಾರೆ. ಅಲ್ಲದೆ, ಸುಪ್ರೀಂ ಕೋರ್ಟ್‌ನಿಂದ ಅಬಕಾರಿ ನೀತಿ ಪ್ರಕರಣದಲ್ಲಿ ಜಾಮೀನು ಪಡೆದ ಬಳಿಕ ತಿಹಾರ್ ಜೈಲಿನಿಂದ ಬಿಡುಗಡೆಯಾಗಿರುವ ಕೇಜ್ರಿವಾಲ್ ಹರಿಯಾಣದಾದ್ಯಂತ ಪ್ರಚಾರದಲ್ಲಿ ಸಕ್ರಿಯರಾಗಿದ್ದಾರೆ.
ಹರಿಯಾಣದ ಜನತೆ ಕಾಂಗ್ರೆಸ್‌ಗೆ ಮತ ನೀಡಲಿದ್ದು, ಚುನಾವಣೆಯಲ್ಲಿ ಪಕ್ಷ ಭಾರಿ ಬಹುಮತ ಗಳಿಸಲಿದೆ ಎಂದು ರಾಬರ್ಟ್ ವಾದ್ರಾ ಭರವಸೆ ವ್ಯಕ್ತಪಡಿಸಿದರು.
90 ಸದಸ್ಯ ಬಲದ ಹರಿಯಾಣ ಚುನಾವಣೆ ಅಕ್ಟೋಬರ್ 5ರಂದು ನಡೆಯಲಿದ್ದು, ಅಕ್ಟೋಬರ್ 8ರಂದು ಮತ ಎಣಿಕೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.