ನವದೆಹಲಿ: ‘ಮಹಾರಾಷ್ಟ್ರದ ರೈತರ ದೊಡ್ಡ ಶತ್ರು ಬಿಜೆಪಿ. ಡಬಲ್ ಎಂಜಿನ್ ಸರ್ಕಾರವನ್ನು ಅಧಿಕಾರದಿಂದ ಕಿತ್ತುಹಾಕುವುದರಿಂದ ಮಾತ್ರ ರೈತರಿಗೆ ಲಾಭವಾಗಲಿದೆ. ಮಹಾಪರಿವರ್ತನೆಯೇ ರಾಜ್ಯದ ಬೇಡಿಕೆಯಾಗಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಸೋಮವಾರ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ರೈತರ ಆತ್ಮಹತ್ಯೆಗೆ ಬಿಜೆಪಿ ಕಾರಣವೆಂದು ಕಿಡಿಕಾರಿ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಜ್ಯವನ್ನು ಬರದಿಂದ ಮುಕ್ತಗೊಳಿಸುವುದಾಗಿ ಬಿಜೆಪಿ ಸುಳ್ಳು ಭರವಸೆ ನೀಡಿದೆ ಎಂದು ಟೀಕಿಸಿದ್ದಾರೆ.
ಬಿಜೆಪಿಯು ಮಹಾರಾಷ್ಟ್ರದ ರೈತರ ಅತ್ಯಂತ ದೊಡ್ಡ ಶತ್ರು. ರಾಜ್ಯದಲ್ಲಿ 20 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿಗೆ ಅನುದಾನವನ್ನು ಕಡಿತ ಮಾಡಲಾಗಿದೆ. ನೀರಾವರಿಗೆ ₹20 ಸಾವಿರ ಕೋಟಿ ಕೊಡುವುದಾಗಿ ನೀಡಿದ್ದ ಭರವಸೆ ಹುಸಿಯಾಗಿದೆ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ವಿಮಾ ಕಂಪನಿಗಳು ವಿಮಾ ಕಂತುಗಳಿಂದ ₹8,000 ಕೋಟಿ ಬಾಚಿಕೊಳ್ಳುತ್ತಿವೆ. ಆದರೆ, ರೈತರಿಗೆ ಪರಿಹಾರ ನೀಡಲು ನಿರಾಕರಿಸಲಾಗುತ್ತಿದೆ. ಈರುಳ್ಳಿ ಮತ್ತು ಸೋಯಾಬೀನ್ ರಫ್ತು ನಿಷೇಧ ಹೇರಿಕೆ ಮತ್ತು ಹೆಚ್ಚಿನ ರಫ್ತು ಸುಂಕ ವಿಧಿಸುವುದು ರೈತರಿಗೆ ಹೊರೆಯಾಗುತ್ತಿದೆ. ಹತ್ತಿ ಮತ್ತು ಕಬ್ಬು ಉತ್ಪಾದನೆಯಲ್ಲಿ ಭಾರಿ ಕುಸಿತ ಉಂಟಾಗಿದೆ. ಇವೆಲ್ಲವೂ ರೈತರನ್ನು ಸಂಕಷ್ಟಕ್ಕೆ ತಳ್ಳಿವೆ. ರಾಜ್ಯದಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘಗಳು ಬಿಕ್ಕಟ್ಟಿಗೆ ಸಿಲುಕಿರುವುದನ್ನು ಸರ್ಕಾರವೇ ಒಪ್ಪಿಕೊಂಡಿದೆ ಎಂದು ಖರ್ಗೆ, ಬಿಜೆಪಿ ವಿರುದ್ಧ ಕಿಡಿಕಾರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.