ADVERTISEMENT

ತೆಲಂಗಾಣ ಹಂಗಾಮಿ ಸ್ಪೀಕರ್ ಆಗಿ ಅಕ್ಬರುದ್ದೀನ್: ಪ್ರಮಾಣ ವಚನ ಬಹಿಷ್ಕರಿಸಿದ ಬಿಜೆಪಿ

ಪಿಟಿಐ
Published 9 ಡಿಸೆಂಬರ್ 2023, 8:08 IST
Last Updated 9 ಡಿಸೆಂಬರ್ 2023, 8:08 IST
<div class="paragraphs"><p>ಹಂಗಾಮಿ ಸ್ಪೀಕರ್ ಅಕ್ಬರುದ್ದೀನ್ ಓವೈಸಿ</p></div>

ಹಂಗಾಮಿ ಸ್ಪೀಕರ್ ಅಕ್ಬರುದ್ದೀನ್ ಓವೈಸಿ

   

ಹೈದರಾಬಾದ್: ಎಐಎಂಐಎಂ ಶಾಸಕ ಅಕ್ಬರುದ್ದೀನ್ ಒವೈಸಿ ಅವರನ್ನು ತೆಲಂಗಾಣದ ವಿಧಾನಸಭೆಗೆ ಹಂಗಾಮಿ ಸ್ಪೀಕರ್‌ ಆಗಿ ಆಯ್ಕೆ ಮಾಡಲಾಗಿದ್ದು, ಅವರ ಆಯ್ಕೆಯನ್ನು ಬಿಜೆಪಿ ವಿರೋಧಿಸಿದೆ.

ತೆಲಂಗಾಣ ವಿಧಾನಸಭೆಗೆ ಹೊಸದಾಗಿ ಆಯ್ಕೆಯಾಗಿರುವ ಶಾಸಕರಿಗೆ ಶನಿವಾರ ಪ್ರಮಾಣ ವಚನ ಬೋಧಿಸಲಾಯಿತು. ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಮೊದಲು ಪ್ರಮಾಣ ವಚನ ಸ್ವೀಕರಿಸಿದರು.

ADVERTISEMENT

ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಬಹಿಷ್ಕರಿಸಲು ಬಿಜೆಪಿ ತೀರ್ಮಾನಿಸಿತು. ಅಕ್ಬರುದ್ದೀನ್ ಒವೈಸಿ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡುವಲ್ಲಿ ವಿಧಾನಸಭೆಯ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಹಿರಿಯ ಶಾಸಕರು ಬೇರೆ ಇದ್ದರೂ ಅಕ್ಬರುದ್ದೀನ್ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಜಿ. ಕಿಶನ್ ರೆಡ್ಡಿ ಆರೋಪಿಸಿದರು. ‘ಹಿರಿಯ ಶಾಸಕರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡುವ ಸಂಪ್ರದಾಯ ಇದೆ’ ಎಂದು ರೆಡ್ಡಿ ತಿಳಿಸಿದರು.

ವಿಧಾನಸಭೆಯಲ್ಲಿ ಕಾಂಗ್ರೆಸ್‌ಗೆ ಇರುವುದು ಬಹಳ ಅಲ್ಪ ಪ್ರಮಾಣದ ಬಹುಮತ. ಸರ್ಕಾರವು ಸಣ್ಣ ಕಾರಣಕ್ಕೂ ಉರುಳುವ ಸಾಧ್ಯತೆ ಇದೆ. ಹೀಗಾಗಿ, ಹೊಂದಾಣಿಕೆಯ ಭಾಗವಾಗಿ ಎಐಎಂಐಎಂ ಶಾಸಕರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಲಾಗಿದೆ ಎಂದು ಕಿಶನ್ ರೆಡ್ಡಿ ಆರೋಪಿಸಿದರು.

‘ಕಾಂಗ್ರೆಸ್ ಪಕ್ಷವು ಅಧಿಕಾರ ಸ್ವೀಕರಿಸಿದ ಮೂರೇ ದಿನಗಳಲ್ಲಿ ತುಷ್ಟೀಕರಣದ ರಾಜಕಾರಣವನ್ನು ಆರಂಭಿಸಿದೆ, ವಿಧಾನಸಭೆಯ ನಿಯಮಗಳನ್ನು ಉಲ್ಲಂಘಿಸಿದೆ. ನಿಯಮ ಉಲ್ಲಂಘನೆಯ ಕಾರಣಕ್ಕೆ ನಾವು ಅಕ್ಬರುದ್ದೀನ್ ಅವರ ನೇಮಕವನ್ನು ವಿರೋಧಿಸುತ್ತಿದ್ದೇವೆ’ ಎಂದರು.

ಶಾಸಕಾಂಗ ಪಕ್ಷಕ್ಕೆ ಕೆಸಿಆರ್ ನಾಯಕ: ಬಿಆರ್‌ಎಸ್‌ ಪಕ್ಷವು ತನ್ನ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಕೆ. ಚಂದ್ರಶೇಖರ ರಾವ್ ಅವರನ್ನು ಆಯ್ಕೆ ಮಾಡಿದೆ. ಹೊಸದಾಗಿ ಆಯ್ಕೆಯಾಗಿರುವ ಬಿಆರ್‌ಎಸ್‌ ಶಾಸಕರ ಸಭೆಯಲ್ಲಿ ಈ ಆಯ್ಕೆಯನ್ನು ಪ್ರಕಟಿಸಲಾಯಿತು.

‘ನಾವು ತೆಲಂಗಾಣದಲ್ಲಿ 8 ಸ್ಥಾನಗಳನ್ನು ಗೆದ್ದಿದ್ದೇವೆ. ಹಿರಿಯ ನಾಯಕರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸುವುದು ಸಂಪ್ರದಾಯ. ಆದರೆ, ಎಐಎಂಐಎಂ ಜೊತೆಗಿನ ಹೊಂದಾಣಿಕೆಯಿಂದಾಗಿ ಕಾಂಗ್ರೆಸ್ ಅಕ್ಬರುದ್ದೀನ್ ಓವೈಸಿ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಿದೆ. ಇದಕ್ಕೆ ನಾವು ಆಕ್ಷೇಪಿಸುತ್ತೇವೆ. ಈ ಕುರಿತು ರಾಜ್ಯಪಾಲರಿಗೆ ಮಾಹಿತಿ ನೀಡುತ್ತೇವೆ’ ಎಂದು ತೆಲಂಗಾಣ ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.