ನವದೆಹಲಿ: ಪಶ್ಚಿಮ ಬಂಗಳಾದ 42 ಲೋಕಸಭೆ ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದ್ದು, ಪ್ರತಿಷ್ಟಿತ ಅಸನ್ಸೋಲ್ ಕ್ಷೇತ್ರದಲ್ಲಿ ಘರ್ಷಣೆ ಏರ್ಪಟ್ಟಿದೆ. ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಬಬುಲ್ ಸುಪ್ರಿಯೋ ಅವರ ಕಾರಿನ ಮೇಲೆ ಟಿಎಂಸಿ ಕಾರ್ಯಕರ್ತರು ದಾಳಿ ನಡೆಸಿ ಜಖಂಗೊಳಿಸಿದ್ದಾರೆ.
ಸೋಮವಾರ ಬೆಳಗ್ಗೆ 9ರ ಸುಮಾರಿನಲ್ಲಿ ಈ ಘರ್ಷಣೆ ಏರ್ಪಟ್ಟಿದೆ. ಘಟನೆ ಕುರಿತು ಮಾತನಾಡಿರುವ ಬಿಜೆಪಿ ಅಭ್ಯರ್ಥಿ ಬಬುಲ್ ಸುಪ್ರಿಯೋ, ‘ಟಿಎಂಸಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ. ನಾನು ಕ್ಷೇತ್ರದಲ್ಲಿ ಓಡಾಡದೇ ಇರದಂತೆ ಮಾಡಲು, ಒಂದೇ ಕಡೆಗೆ ಸೀಮಿತವಾಗುವಂತೆ ಮಾಡಲು ಟಿಎಂಸಿ ನನ್ನ ವಿರುದ್ಧ ಹೀಗೆಲ್ಲ ಮಾಡುತ್ತಿದೆ. ಈ ಕ್ಷೇತ್ರದಲ್ಲಿ ಮತಗಟ್ಟೆಗಳ ಎದುರು ಇರುವ ಮನೆಗಳ ನಿವಾಸಿಗಳೂ ಹೊರಗೆ ಬಂದು ಮತ ಹಾಕದಂತಾ ಪರಿಸ್ಥಿತಿ ನಿರ್ಮಾಣವಾಗಿದೆ,’ ಎಂದು ಅವರು ಟಿಎಂಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದೇ ಕ್ಷೇತ್ರದ ಬೂತ್ ಸಂಖ್ಯೆ 199ರಲ್ಲಿ ಟಿಎಂಸಿ ಮತ್ತು ಸಿಆರ್‌ಪಿಎಫ್ ಸಿಬ್ಬಂದಿ ನಡುವೆ ಘರ್ಷಣೆ ಸಂಭವಿಸಿದೆ.125–129ನೇ ಬೂತ್‌ನಲ್ಲಿ ಬಿಜೆಪಿ, ಸಿಪಿಎಂ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಹೊಡೆದಾಟ ನಡೆಯಿತು. ಭದ್ರತಾ ಸಿಬ್ಬಂದಿ ಇರದೇ ಇದ್ದರೂ ಮತದಾನ ಪ್ರಕ್ರಿಯೆ ಆರಂಭವಾಗಬೇಕು ಎಂದು ಟಿಎಂಸಿ ಕಾರ್ಯಕರ್ತರು ಆಗ್ರಹಿಸಿದ್ದರಿಂದ ಈ ಗಲಾಟೆ ಆರಂಭವಾಯಿತು. ಭದ್ರತೆಯೊಂದಿಗೇ ಮತದಾನ ಆರಂಭವಾಗಬೇಕು ಎಂದು ಸಿಪಿಎಂ ಮತ್ತು ಬಿಜೆಪಿ ಕಾರ್ಯಕರ್ತರು ಪಟ್ಟು ಹಿಡಿದರು.
ಪಶ್ಚಿಮ ಬಂಗಾಗಳದಲ್ಲಿ ನಡೆದ ಹಿಂದಿನ ಮೂರು ಮತದಾನ ಪ್ರಕ್ರಿಯೆ ವೇಳೆಯೂ ಘರ್ಷಣೆ ಸಂಭವಿಸಿತ್ತು. ಈ ವೇಳೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಎರಡನೇ ಹಂತದ ಮತದಾನದ ವೇಳೆ ಸಿಪಿಎಂ ಅಭ್ಯರ್ಥಿ ಎಂ.ಡಿ ಸಲೀಂ ಅವರ ಮೇಲೆ ದಾಳಿ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.