ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಪೂರ್ವಭಾವಿಯಾಗಿ ‘ಆರಕ್ಷಣ ಬಚಾವೊ ಯಾತ್ರೆ’ ನಡೆಸುತ್ತಿರುವ ವಂಚಿತ್ ಬಹುಜನ ಅಘಾಡಿ ಸಂಸ್ಥಾಪಕ ಪ್ರಕಾಶ್ ಅಂಬೇಡ್ಕರ್ ಅವರು ಬಿಜೆಪಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಹಾಗೂ ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ಆ ಎರಡು ಪಕ್ಷಗಳಿಗೂ ದಲಿತರು, ಆದಿವಾಸಿಗಳು, ಮುಸ್ಲಿಮರು ಮತ್ತು ಇತರ ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಇಲ್ಲ. ಆದರೆ, ಚುನಾವಣೆಗಳಲ್ಲಿ ಅವರ ಮತಗಳ ಪಡೆಯಲು ಬಯಸುತ್ತಾರೆ ಎಂದು ಪ್ರಕಾಶ್ ಟೀಕಿಸಿದ್ದಾರೆ.
ಬಿಜೆಪಿಯು ‘ಮಹಾಯುತಿ’ಯನ್ನು (ಎನ್‌ಡಿಎ) ಮುನ್ನಡೆಸಿದರೆ, ಕಾಂಗ್ರೆಸ್ ‘ಇಂಡಿಯಾ’ ಮೈತ್ರಿಕೂಟವನ್ನು (ಮಹಾ ವಿಕಾಸ್ ಅಘಾಡಿ) ಮುನ್ನಡೆಸುತ್ತಿದೆ. ಲೋಕಸಭೆ ಚುನಾವಣೆ ಸಂದರ್ಭ ಮಹಾರಾಷ್ಟ್ರದಲ್ಲಿ ‘ಮಹಾಯುತಿ’ ಜತೆ ಮೈತ್ರಿ ಮಾಡಿಕೊಳ್ಳಲು ಮಹಾ ವಿಕಾಸ್ ಅಘಾಡಿ (ವಿಬಿಎ) ಪ್ರಯತ್ನಿಸಿತ್ತು. ಆದರೆ, ಇದು ಕಾರ್ಯರೂಪಕ್ಕೆ ಬರಲಿಲ್ಲ ಎಂದು ಪ್ರಕಾಶ್ ಅಂಬೇಡ್ಕರ್ ಆರೋಪಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಮರಾಠ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿಗೆ ಒತ್ತಾಯಿಸಿ ಎರಡು ಪ್ರತ್ಯೇಕ ಆಂದೋಲನಗಳು ನಡೆಯುತ್ತಿರುವ ನಡುವೆಯೇ, ಪ್ರಕಾಶ್ ಅಂಬೇಡ್ಕರ್ ಅವರು ಇದೇ 25ರಿಂದ ಆಗಸ್ಟ್ 7ರವರೆಗೆ ರಾಜ್ಯದಾದ್ಯಂತ ‘ಆರಕ್ಷಣ ಬಚಾವೊ ಯಾತ್ರೆ’ ಕೈಗೊಂಡಿದ್ದಾರೆ.
ದಲಿತರು, ಆದಿವಾಸಿಗಳು, ಮುಸ್ಲಿಮರು ಮತ್ತು ಒಬಿಸಿ ಸಮುದಾಯದವರು ಬಿಜೆಪಿ ಮತ್ತು ಕಾಂಗ್ರೆಸ್ ಎರಡನ್ನೂ ಏಕೆ ನಂಬುವುದಿಲ್ಲ? ಬಜೆಟ್ ಸಿದ್ಧಪಡಿಸಿದ 20 ಅಧಿಕಾರಿಗಳ ಪೈಕಿ ಒಬ್ಬ ಒಬಿಸಿ ಮತ್ತು ಒಬ್ಬ ಅಲ್ಪಸಂಖ್ಯಾತರು ಮಾತ್ರ ಇದ್ದಾರೆ ಎಂದು ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಇದು ನಿಜ ಎಂದು ಪ್ರಕಾಶ್ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಷ್ಟು ದಲಿತರು, ಆದಿವಾಸಿಗಳು, ಮುಸ್ಲಿಮರು ಮತ್ತು ಒಬಿಸಿ ಅಧಿಕಾರಿಗಳು ಬಜೆಟ್ ಸಿದ್ಧಪಡಿಸಿದ್ದಾರೆ ಎಂಬುದನ್ನು ರಾಹುಲ್ ಗಾಂಧಿ ಏಕೆ ಪ್ರಸ್ತಾಪಿಸಲಿಲ್ಲ ಎಂದು ಗುಡುಗಿರುವ ಪ್ರಕಾಶ್, ದಲಿತರು, ಆದಿವಾಸಿಗಳು, ಮುಸ್ಲಿಮರು ಮತ್ತು ಒಬಿಸಿಗಳು ಕಾಂಗ್ರೆಸ್‌ನ ಹುಸಿ ಪ್ರೀತಿಗೆ ಒಳಗಾಗಬೇಡಿ ಎಂದು ಕರೆ ನೀಡಿದ್ದಾರೆ.
ಇದೇ ವೇಳೆ ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಮತ್ತು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನೂ ಪ್ರಕಾಶ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.