ADVERTISEMENT

ಭವಿಷ್ಯದ ಚಿಂತನೆ ನಡೆಸದ ಬಿಜೆಪಿಗೆ ತುರ್ತುಪರಿಸ್ಥಿತಿ ಚಿಂತೆ: ಸಂಜಯ್‌ ರಾವುತ್‌

ಪಿಟಿಐ
Published 13 ಜುಲೈ 2024, 12:25 IST
Last Updated 13 ಜುಲೈ 2024, 12:25 IST
ಸಂಜಯ್‌ ರಾವುತ್‌
ಸಂಜಯ್‌ ರಾವುತ್‌   

ಮುಂಬೈ: ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿಕೆಯಾಗಿ 50 ವರ್ಷಗಳು ಕಳೆದಿವೆ. ಆದರೂ, ಬಿಜೆಪಿಯವರು ಭವಿಷ್ಯದ ಬಗ್ಗೆ ಚಿಂತನೆ ನಡೆಸುವುದನ್ನು ಬಿಟ್ಟು, ತುರ್ತು ಪರಿಸ್ಥಿತಿಯತ್ತಲೇ ಗಮನ ಕೇಂದ್ರೀಕರಿಸಿದ್ದಾರೆ ಎಂದು ಉದ್ಧವ್‌ ಠಾಕ್ರೆ ಬಣದ ಶಿವಸೇನಾ ನಾಯಕ ಸಂಜಯ್‌ ರಾವುತ್‌ ಟೀಕಿಸಿದ್ದಾರೆ.

ಮಾಜಿ ಪ್ರಧಾನಿ, ದಿವಂಗತ ಇಂದಿರಾ ಗಾಂಧಿ ಅವರು 1975ರ ಜೂನ್‌ 25ರಂದು ದೇಶದಾದ್ಯಂತ ತುರ್ತುಪರಿಸ್ಥಿತಿ ಘೋಷಿಸಿದ್ದರು. ಆ ದಿನವನ್ನು ಸಂವಿಧಾನ ಹತ್ಯಾ ದಿನವನ್ನಾಗಿ ಆಚರಿಸಲಾಗುವುದು ಎಂದು ಕೇಂದ್ರ ಸರ್ಕಾರ ಶುಕ್ರವಾರ ಹೇಳಿತ್ತು. ಈ ಕುರಿತು ರಾವುತ್‌ ಪ್ರತಿಕ್ರಿಯಿಸಿದ್ದಾರೆ.

ಪಿಟಿಐ ಜೊತೆ ಮಾತನಾಡಿರುವ ಅವರು, ‍ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಅವಧಿಯೂ ತುರ್ತುಪರಿಸ್ಥಿತಿಯಂತೆಯೇ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

'ಯಾರನ್ನು ಬೇಕಾದರೂ ಜೈಲಿಗೆ ಅಟ್ಟುವಂತಹ ಸ್ಥಿತಿ ಇದೆ. ನ್ಯಾಯಾಲಯದ ಮೇಲೂ ಒತ್ತಡವಿದೆ. ಕೇಂದ್ರೀಯ ಸಂಸ್ಥೆಗಳನ್ನು ನೀವು (ಕೇಂದ್ರ ಸರ್ಕಾರ) ನಡೆಸುತ್ತಿದ್ದೀರಿ. ನಿಮ್ಮ ವಿರೋಧಿಗಳನ್ನು ಜೈಲಿಗೆ ತಳ್ಳುತ್ತಿದ್ದೀರಿ. ಭ್ರಷ್ಟಾಚಾರ ಮತ್ತು ಅರಾಜಕತೆ ವಿಪರೀತವಾಗುತ್ತಿದೆ. ಚೀನಾ ಅತಿಕ್ರಮಣ ಮಾಡುತ್ತಿದೆ. ಈಗಿನ ಸ್ಥಿತಿಯೂ ಆಗಿನಂತೆಯೇ (ತುರ್ತುಪರಿಸ್ಥಿತಿಯಂತೆಯೇ) ಇದೆ. ಇಂದಿರಾ ಗಾಂಧಿ ಅವರು ತುಂಬಾ ಅಪಾಯಕಾರಿ ಸನ್ನಿವೇಶದಲ್ಲಿ ಕೆಲಸ ಮಾಡಿದ್ದರು' ಎಂದು ರಾವುತ್‌ ಹೇಳಿದ್ದಾರೆ.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಿಜೆಪಿ ನಾಯಕರೂ ಸೇರಿದಂತೆ ವಿರೋಧ ಪಕ್ಷಗಳ ಹಲವರು ಜೈಲು ಸೇರಿದ್ದರು.

'ಸಂವಿಧಾನ ಹತ್ಯಾ ದಿವಸ್‌'
'1975ರ ಜೂನ್‌ 25ರಂದು ತುರ್ತುಪರಿಸ್ಥಿತಿ ಘೋಷಣೆಯಾಯಿತು. ದೇಶದ ಜನರು ಮಿತಿಮೀರಿದ ದೌರ್ಜನ್ಯಕ್ಕೆ ತುತ್ತಾದರು. ಆ ಅವಧಿಯಲ್ಲಿ ಅಧಿಕಾರ ದುರುಪಯೋಗದ ವಿರುದ್ಧ ಹೋರಾಟ ನಡೆಸಿದ್ದ ಮತ್ತು ಸಂಕಷ್ಟ ಅನುಭವಿಸಿದ್ದ ಎಲ್ಲರಿಗೂ ಗೌರವ ಸಲ್ಲಿಸಲು ಜೂನ್‌ 25 ಅನ್ನು 'ಸಂವಿಧಾನ ಹತ್ಯಾ ದಿವಸ್‌' ಎಂದು ಘೋಷಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಶುಕ್ರವಾರ ಅಧಿಸೂಚನೆ ಹೊರಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.