ಅಯೋಧ್ಯೆ (ಉತ್ತರಪ್ರದೇಶ): ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ 12 ವರ್ಷದ ಬಾಲಕಿಯ ಕುಟುಂಬದ ಸದಸ್ಯರನ್ನು ಭಾನುವಾರ ಭೇಟಿಯಾದ ಬಿಜೆಪಿಯ ಮೂವರು ಸದಸ್ಯರನ್ನು ಒಳಗೊಂಡ ನಿಯೋಗವು ವಿಸ್ತೃತ ಚರ್ಚೆ ನಡೆಸಿತು.
‘ರಾಜ್ಯಸಭಾ ಸಂಸದೆ ಸಂಗೀತಾ ಬಲವಂತ್, ಉತ್ತರ ಪ್ರದೇಶ ಹಿಂದುಳಿದ ವರ್ಗಗಳ ಅಭಿವೃದ್ಧಿ ಸಚಿವ ನರೇಂದ್ರ ಕಶ್ಯಪ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ತಂಡ ಸಂಗ್ರಹಿಸಿದ ವರದಿಯನ್ನು ಬಿಜೆಪಿ ಹಿಂದುಳಿದ ವರ್ಗಗಳ ಘಟಕದ ರಾಷ್ಟ್ರೀಯ ಅಧ್ಯಕ್ಷ ಕೆ.ಲಕ್ಷ್ಮಣ್ ಅವರಿಗೆ ವರದಿ ಸಲ್ಲಿಸಲಿದೆ’ ಎಂದು ರಾಜ್ಯಸಭಾ ಸಂಸದ ಬಾಬುರಾಮ್ ನಿಶಾದ್ ಅವರು ಭೇಟಿಯ ಬಳಿಕ ತಿಳಿಸಿದರು.
‘ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮೊಯಿದ್ ಖಾನ್ ಪ್ರಮುಖ ಆರೋಪಿಯಾಗಿದ್ದು, ಸಮಾಜವಾದಿ ಪಕ್ಷದ ಸದಸ್ಯನಾಗಿದ್ದಾನೆ. ಫೈಜಾಬಾದ್ ಸಂಸದ ಅವಧೇಶ್ ಪ್ರಸಾದ್ ತಂಡದಲ್ಲಿಯೂ ಗುರುತಿಸಿಕೊಂಡಿದ್ದಾನೆ’ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದರು.
‘ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ತಾಯಿ ಹಾಗೂ ಕುಟುಂಬದ ಇತರೆ ಸದಸ್ಯರನ್ನು ಭೇಟಿಯಾಗಿ ಸಮಗ್ರ ಮಾಹಿತಿ ಪಡೆದಿದ್ದು, ಸರ್ಕಾರದಿಂದ ಆರೋಪಿ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಆರೋಪಿ ವಿರುದ್ಧ ತಳಮಟ್ಟದಿಂದಲೂ ಮಾಹಿತಿ ಸಂಗ್ರಹಿಸುತ್ತಿದ್ದೇವೆ’ ಎಂದು ನಿಶಾದ್ ವಿವರಿಸಿದರು.
‘ಆರೋಪಿ ವಿರುದ್ಧ ಸರ್ಕಾರ ತೆಗೆದುಕೊಂಡ ಕಾನೂನು ಕ್ರಮಗಳ ಕುರಿತು ಕುಟುಂಬದ ಸದಸ್ಯರು ಸಂತೃಪ್ತರಾಗಿದ್ದಾರೆ’ ಎಂದರು.
ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಯೋಧ್ಯೆ ಜಿಲ್ಲೆಯ ಬಾದರಸಾ ನಗರದಲ್ಲಿ ಬೇಕರಿ ನಡೆಸುತ್ತಿದ್ದ ಆರೋಪಿಗಳಾದ ಮೊಯಿದ್ ಖಾನ್, ಆತನ ನೌಕರ ರಾಜು ಖಾನ್‌ನನ್ನು ಜುಲೈ 30ರಂದು ಪೊಲೀಸರು ಬಂಧಿಸಿದ್ದರು.
ಎರಡು ತಿಂಗಳ ಹಿಂದೆ ಇಬ್ಬರೂ ಸೇರಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದು, ನಂತರ ಈ ಕೃತ್ಯವನ್ನು ವಿಡಿಯೊ ಮಾಡಿಟ್ಟುಕೊಂಡಿದ್ದರು. ಇತ್ತೀಚಿಗೆ ಬಾಲಕಿಯ ಆರೋಗ್ಯ ತಪಾಸಣೆ ನಡೆಸಿದ ವೇಳೆ ಆಕೆ ಗರ್ಭಿಣಿಯಾಗಿರುವುದು ದೃಢಪಟ್ಟಿತ್ತು.
‘ಅಯೋಧ್ಯೆಯಲ್ಲಿ ಈ ಪ್ರಕರಣ ನಡೆದಿದೆ. ಆರೋಪಿಯು ಸಮಾಜವಾದಿ ಪಕ್ಷಕ್ಕೆ ಸೇರಿದ್ದು, ಆತನ ವಿರುದ್ಧ ಪಕ್ಷವೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ’ ಎಂದು ಗುರುವಾರ ಅಧಿವೇಶನದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಾಹಿತಿ ನೀಡಿದ್ದರು.
ಬೇಕರಿ ನೆಲಸಮ: ಅಯೋಧ್ಯಾ ಜಿಲ್ಲಾಡಳಿತವು ಖಾನ್‌ಗೆ ಸೇರಿದ ಬೇಕರಿಯನ್ನು ಶನಿವಾರ ಒಡೆದುಹಾಕಿತ್ತು.
‘ಕಾನೂನುಬಾಹಿರವಾಗಿ ನೀರಿನ ಕೊಳದ ಮೇಲೆ ಅಕ್ರಮವಾಗಿ ಬೇಕರಿಯನ್ನು ನಿರ್ಮಿಸಿದ್ದರಿಂದ ಒಡೆದುಹಾಕಲಾಗಿದೆ’ ಎಂದು ಅಯೋಧ್ಯೆ ಜಿಲ್ಲಾಧಿಕಾರಿ ಚಂದ್ರ ವಿಜಯ್ ಸಿಂಗ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.