ADVERTISEMENT

ಪ್ರಚೋದನಾಕಾರಿ ಭಾಷಣದ ಮೂಲಕ ಜನರ ದಾರಿ ತಪ್ಪಿಸುತ್ತಿರುವ ಬಿಜೆಪಿ: ಖರ್ಗೆ

'ಭರವಸೆಗಳನ್ನು ಈಡೇರಿಸಲು ಕಾಂಗ್ರೆಸ್‌ ಬದ್ಧ'

​ಪ್ರಜಾವಾಣಿ ವಾರ್ತೆ
ಪಿಟಿಐ
Published 9 ನವೆಂಬರ್ 2024, 16:02 IST
Last Updated 9 ನವೆಂಬರ್ 2024, 16:02 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ಮುಂಬೈ: ಕರ್ನಾಟಕದಲ್ಲಿನ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಂಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ’ನಮ್ಮ ಪಕ್ಷವು ಯಾವಾಗಲೂ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತದೆ. ಹೀಗಾಗಿ, ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುತ್ತದೆ‘ ಎಂದು ಹೇಳಿದರು.

ಕಾಂಗ್ರೆಸ್‌ ಆಡಳಿತ ಇರುವ ರಾಜ್ಯಗಳಲ್ಲಿ ಚುನಾವಣಾ ಪೂರ್ವ ಘೋಷಿಸಿರುವ ಗ್ಯಾರಂಟಿಗಳನ್ನು ಪೂರೈಸಲು ಕಾಂಗ್ರೆಸ್‌ ವಿಫಲವಾಗಿದೆ ಎಂಬ ಬಿಜೆಪಿ ಆರೋಪಕ್ಕೆ ಖರ್ಗೆ ಅವರು ನಾಗ್ಪುರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದ್ದಾರೆ.

ಪ್ರಚೋದನಕಾರಿ ಭಾಷಣ ಮತ್ತು ಸುಳ್ಳುಗಳ ಮೂಲಕ ಬಿಜೆಪಿ ನಾಯಕರು ಜನರ ಗಮನವನ್ನು ಬೇರೆಡೆ ಸೆಳೆಯುತ್ತಿದ್ದಾರೆ. ಮಹಾರಾಷ್ಟ್ರವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುವ ಉತ್ತಮ ಸರ್ಕಾರದ ಅಗತ್ಯವಿದೆ. ಈ ಬಾರಿಯ ಚುನಾವಣೆಯಲ್ಲಿ ಮಹಾ ವಿಕಾಸ್‌ ಆಘಾಡಿ (ಎಂವಿಎ) ಗೆಲುವು ದಾಖಲಿಸಲಿದೆ’ ಎಂದು ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು. 

ADVERTISEMENT

‘ಬಿಜೆ‍ಪಿಯು ಕಾಂಗ್ರೆಸ್‌ ಜತೆ ವಾಗ್ವಾದ ನಡೆಸುವುದರಲ್ಲಿ ನಿರತವಾಗಿದೆ. ಕಳೆದ 11 ವರ್ಷಗಳಲ್ಲಿ ಬಿಜೆಪಿ ಸರ್ಕಾರ ಏನು ಮಾಡಿದೆ ಎಂದು ಅವರು ಹೇಳಲಿ, 55 ವರ್ಷಗಳಲ್ಲಿ ಕಾಂಗ್ರೆಸ್‌ ಯಾವ ಕೆಲಸ ಮಾಡಿದೆ ಎಂದು ನಾವು ಹೇಳುತ್ತೇವೆ’ ಎಂದು ಖರ್ಗೆ ಸವಾಲು ಹಾಕಿದರು.

‘ವಿಭಜನೆಯಾದರೆ ನಾವು ನಾಶವಾಗುತ್ತೇವೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳುತ್ತಾರೆ. ಒಗ್ಗಟ್ಟಾಗಿದ್ದರೆ ನಾವು ಸುರಕ್ಷಿತರಾಗಿರುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳುತ್ತಾರೆ. ಮೊದಲು ನೀವು ನಿರ್ಧಾರ ಮಾಡಿ ಯಾರ ಘೋಷಣೆಯನ್ನು ಜನ ಅನುಸರಿಸಬೇಕು, ಮೋದಿ ಜೀ ಅವರದ್ದಾ ಅಥವಾ ಯೋಗಿಯವರದ್ದಾ’ ಎಂದು ಖರ್ಗೆ ಪ್ರಶ್ನಿಸಿದ್ದಾರೆ.

‘ಬೃಹತ್‌ ಹೂಡಿಕೆಯು ಗುಜರಾತ್‌ ಪಾಲಾಗುವುದನ್ನು ವಿದರ್ಭದ ಇಬ್ಬರು ಮಹಾನಾಯಕರು ತಪ್ಪಿಸಲಿಲ್ಲ. ಅವರು ತಮ್ಮ ಅಧಿಕಾರ ಉಳಿಸಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ ಹೊರತು ಜನರ ಹಿತಾಸಕ್ತಿಯ ಬಗ್ಗೆ ಯೋಚನೆ ಮಾಡುತ್ತಿಲ್ಲ’ ಎಂದು ಖರ್ಗೆ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.