ADVERTISEMENT

ಮಂದಿರ ಬಿಜೆಪಿ ಗುತ್ತಿಗೆಯಲ್ಲ: ಉಮಾಭಾರತಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2018, 20:16 IST
Last Updated 26 ನವೆಂಬರ್ 2018, 20:16 IST
ಉಮಾಭಾರತಿ
ಉಮಾಭಾರತಿ   

ನವದೆಹಲಿ: ‘ರಾಮ ಮಂದಿರ ವಿಚಾರವನ್ನು ಬಿಜೆಪಿ ಗುತ್ತಿಗೆಗೆ ಪಡೆದಿಲ್ಲ. ರಾಮ ಎಲ್ಲರಿಗೂ ದೇವರು’ ಎಂದು ಕೇಂದ್ರ ಸಚಿವೆ ಉಮಾಭಾರತಿ ಹೇಳಿದ್ದಾರೆ. ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರು ಅಯೋಧ್ಯೆಗೆ ಭಾನುವಾರ ನೀಡಿದ ಭೇಟಿಗೆ ಅವರು ಬೆಂಬಲ ಕೊಟ್ಟಿದ್ದಾರೆ ಎಂದು ಎನ್‌ಡಿ ಟಿ.ವಿ. ವರದಿ ಮಾಡಿದೆ.

ಬಿಜೆಪಿಯ ಅಯೋಧ್ಯೆ ಕಾರ್ಯಸೂಚಿಯನ್ನು ಶಿವಸೇನಾ ಅಪಹರಿಸುತ್ತಿದೆ ಎಂದು ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ ಪ್ರಸಾದ್‌ ಮೌರ್ಯ ಮತ್ತು ಬಲಿಯಾ ಶಾಸಕ ಸುರೇಂದ್ರ ಸಿಂಗ್‌ ಭಾನುವಾರವಷ್ಟೇ ಆರೋಪಿಸಿದ್ದರು. ಉಮಾ ಅವರು ತಮ್ಮ ಪಕ್ಷದ ಮುಖಂಡರಿಗಿಂತ ಭಿನ್ನವಾದ ನಿಲುವು ತಾಳಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ಬೆಂಬಲ ನೀಡುವಂತೆ ಅವರು ಎಸ್‌ಪಿ, ಬಿಎಸ್‌ಪಿ, ಅಕಾಲಿ ದಳ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಅವರನ್ನು ಕೋರಿದ್ದಾರೆ.

ಆದರೆ, 2019ರ ಲೋಕಸಭಾ ಚುನಾವಣೆಗೆ ಮುನ್ನ ಅಯೋಧ್ಯೆ ವಿವಾದವನ್ನು ಕೆದಕಿದ್ದಕ್ಕಾಗಿ ಎಸ್‌ಪಿ ಮತ್ತು ಬಿಎಸ್‌ಪಿ ಮುಖಂಡರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ADVERTISEMENT

ಉತ್ತರ ಭಾರತೀಯರ ಮೇಲೆ ದಾಳಿ ನಡೆಸುತ್ತಿರುವುದಕ್ಕಾಗಿ ಶಿವಸೇನಾವನ್ನು ಸುರೇಂದ್ರ ಸಿಂಗ್‌ ಟೀಕಿಸಿದ್ದಾರೆ. ‘ಮನುಷ್ಯರ ಸೇವೆಗೆ ಸಿದ್ಧವಿಲ್ಲದ ಪಕ್ಷವು ರಾಮನ ಸೇವೆ ಮಾಡಲಾಗದು’ ಎಂದು ಸುರೇಂದ್ರ ಸಿಂಗ್‌ ಹೇಳಿದ್ದರು. ‘ರಾಮ ಮಂದಿರ ಚಳವಳಿಯಲ್ಲಿ ಸೇನಾಕ್ಕೆ ಯಾವುದೇ ಪಾತ್ರ ಇಲ್ಲ’ ಎಂದು ಮೌರ್ಯ ಹೇಳಿದ್ದರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗದಿದ್ದರೆ ಬಿಜೆಪಿ ಅಧಿಕಾರದಲ್ಲಿ ಉಳಿಯದು ಎಂದು ಉದ್ಧವ್‌ ಭಾನುವಾರ ಹೇಳಿದ್ದರು. ಸುಗ್ರೀವಾಜ್ಞೆ ತರುವಂತೆ ಒತ್ತಾಯಿಸಿದ್ದರು. ಇಲ್ಲವಾದರೆ ರಾಮಮಂದಿರ ವಿಚಾರವು ‘ಚುನಾವಣೆಯ ಇನ್ನೊಂದು ಸುಳ್ಳು’ ಎಂದು ಒಪ್ಪಿಕೊಳ್ಳುವಂತೆ ಬಿಜೆಪಿಗೆ ಸವಾಲು ಹಾಕಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.