ADVERTISEMENT

ಬಿಜೆಪಿಗೆ ಕಮಲನಾಥ್ ಅಗತ್ಯವಿಲ್ಲ; ಅವರಿಗೆ ಪಕ್ಷದ ಬಾಗಿಲು ಮುಚ್ಚಿದೆ– ವಿಜಯವರ್ಗೀಯ

ಪಿಟಿಐ
Published 22 ಫೆಬ್ರುವರಿ 2024, 11:00 IST
Last Updated 22 ಫೆಬ್ರುವರಿ 2024, 11:00 IST
<div class="paragraphs"><p>ಕೈಲಾಸ್‌ ವಿಜಯವರ್ಗೀಯ</p></div>

ಕೈಲಾಸ್‌ ವಿಜಯವರ್ಗೀಯ

   

ಜಬಲಪುರ: ಕಾಂಗ್ರೆಸ್‌ನ ಹಿರಿಯ ನಾಯಕ ಕಮಲನಾಥ್ ಅವರು ಪಕ್ಷ ತೊರೆಯುವ ಕುರಿತು ಎದ್ದಿರುವ ಊಹಾಪೋಹಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಧ್ಯಪ್ರದೇಶದ ಸಚಿವ ಕೈಲಾಸ್ ವಿಜಯವರ್ಗೀಯ, ‘ಬಿಜೆಪಿಗೆ ಕಮಲನಾಥ್ ಅವರ ಅಗತ್ಯವಿಲ್ಲ. ಪಕ್ಷದ ಬಾಗಿಲು ಅವರಿಗೆ ಮುಚ್ಚಿದೆ’ ಎಂದಿದ್ದಾರೆ.

ಕಮಲನಾಥ್ ಅವರು ಬಿಜೆಪಿ ಸೇರುವರೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ‘ಕಮಲನಾಥ್ ಅವರ ಅಗತ್ಯ ಬಿಜೆಪಿಗಿಲ್ಲ ಎಂಬುದನ್ನು ಈಗಾಗಲೇ ಹೇಳಿದ್ದೇನೆ. ಹೀಗಾಗಿಯ ಅವರಿಗೆ ಪಕ್ಷದ ಬಾಗಿಲು ಹಾಕಿದೆ’ ಎಂದಿದ್ದಾರೆ.

ADVERTISEMENT

ಕಮಲನಾಥ್ ಹಾಗೂ ಅವರ ಪುತ್ರ ನಕುಲನಾಥ್ ಅವರು ಕಳೆದ ವಾರ ದೆಹಲಿಗೆ ಪ್ರಯಾಣಿಸಿದ ಬೆನ್ನಲ್ಲೇ ಅವರ ಪಕ್ಷಾಂತರ ಚರ್ಚೆಗಳು ಆರಂಭವಾದವು. 77 ವರ್ಷದ ಕಾಂಗ್ರೆಸ್ ನಾಯಕ ಕಮಲನಾಥ್ ಅವರು ಬಿಜೆಪಿ ಸೇರುವ ವಿಷಯವನ್ನು ಅವರ ಆಪ್ತ ಸಜ್ಜನ್ ಸಿಂಗ್ ವರ್ಮ ತಳ್ಳಿಹಾಕಿದ್ದಾರೆ.

ಕಮಲನಾಥ್ ಅವರು ಕಾಂಗ್ರೆಸ್ ತೊರೆಯುವ ವದಂತಿಗಳು ಹರಡಿರುವ ಬೆನ್ನಲ್ಲೇ, ಅವರ ಕ್ಷೇತ್ರವಾದ ಛಿಂದ್ವಾರಾ ಜಿಲ್ಲೆಯಲ್ಲಿ ಅವರ ಅನುಯಾಯಿಗಳು ಬುಧವಾರ ಬಿಜೆಪಿ ಸೇರಿದ್ದಾರೆ.

‍‍‍ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಅವರ ಹಸ್ತಾಂತರ ಕುರಿತು ಕಾಂಗ್ರೆಸ್‌ನ ದಿಗ್ವಿಜಯ ಸಿಂಗ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯವರ್ಗೀಯ, ‘ಕಾಂಗ್ರೆಸ್‌ನ ಹಿರಿಯ ನಾಯಕರು ಅವರಂತೆಯೇ ಹತಾಶೆಗೊಂಡಿದ್ದಾರೆ. ಕಾಂಗ್ರೆಸ್‌ ಪಕ್ಷದ ನಾಯಕರೇ ಅಸಮರ್ಥರಾಗಿರುವುದರಿಂದ ಉಳಿದವರು ತಮ್ಮ ಭವಿಷ್ಯದ ಕುರಿತು ಮಾನಸಿಕ ಒತ್ತಡಕ್ಕೊಳಗಾಗಿ ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ’ ಎಂದು ವಿಜಯವರ್ಗೀಯ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.