ಬೆಂಗಳೂರು: ಇತ್ತೀಚೆಗೆ ಮಹಾರಾಷ್ಟ್ರ ಚುನಾವಣೆಯಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಆಡಿದ್ದ ವಿವಾದಾತ್ಮಕ ಮಾತನ್ನು ಬಿಜೆಪಿ ಸಂಸದೆ, ನಟಿ ಕಂಗನಾ ರನೌತ್ ಸಮರ್ಥಿಸಿದ್ದಾರೆ.
ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ನಾಗ್ಪುರಕ್ಕೆ ಆಗಮಿಸಿದ್ದ ಅವರು, ಯೋಗಿ ಆದಿತ್ಯನಾಥ ಅವರು ಆಡಿರುವ ಮಾತಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ.
ಅಮರಾವತಿಯಲ್ಲಿ ಮಾತನಾಡಿದ್ದ ಯೋಗಿ ಅವರು, ನಾವು (ಹಿಂದೂಗಳು) ಜಾತಿ ಜಾತಿಗಳ ಹೆಸರಿನಲ್ಲಿ ಒಡೆದು ಹೋದರೇ, ಕಡೆಗೆ ಬೇರೆಯವರಿಂದ ಕತ್ತರಿಸಲ್ಪಡುತ್ತೇವೆ ಎಂದು ಹೇಳಿದ್ದರು.
ಮಾಧ್ಯಮದವರೊಂದಿಗೆ ಮಾತನಾಡಿದ ಕಂಗನಾ ಅವರು, ಒಗ್ಗಟ್ಟಿನಲ್ಲಿ ಬಲವಿದೆ ಎಂದು ನಮಗೆ ಬಾಲ್ಯದಿಂದಲೂ ಬೋಧಿಸಿಕೊಂಡು ಬಂದಿದ್ದಾರೆ. ನಾವು ಸಹ ಅದನ್ನೇ ನಂಬಿದ್ದೇವೆ. ನಾವು ಒಗ್ಗಟ್ಟಾಗಿದ್ದರೇ ಉಳಿಯುತ್ತೇವೆ, ಇಲ್ಲದಿದ್ದರೇ ನಮ್ಮನ್ನು ಕತ್ತರಿಸುತ್ತಾರೆ. ನಮ್ಮ ಪಕ್ಷ ಸನಾತನಿ ಪಕ್ಷ. ಪಿಒಕೆಯನ್ನೂ ನಾವು ಪಡೆಯಲಿದ್ದೇವೆ. ಆದರೆ, ವಿರೋಧ ಪಕ್ಷದವರು ವಿಭಜನೆಯ ಸಂಚು ರೂಪಿಸುವಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಈ ಕುರಿತು ಸುದ್ದಿಸಂಸ್ಥೆ ಎಎನ್‌ಐ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.
‘ಕಾಂಗ್ರೆಸ್ ನಾಯಕತ್ವವು 1946ರಲ್ಲಿ ಮುಸ್ಲಿಂ ಲೀಗ್‌ನೊಂದಿಗೆ ಒಪ್ಪಂದ ಮಾಡಿಕೊಂಡಿತು. ಪರಿಣಾಮ ದೇಶದ ವಿಭಜನೆಯಾಯಿತು ಮತ್ತು ಹಿಂದೂಗಳನ್ನು ಹತ್ಯೆಗೈಯಲಾಯಿತು’ ಎಂದು ಯೋಗಿ ಆರೋಪಿಸಿದ್ದರು.
‘ನಮ್ಮಲ್ಲಿ ಒಗ್ಗಟ್ಟು ಇಲ್ಲದಿದ್ದರೆ ನಮ್ಮ ಹೆಣ್ಣುಮಕ್ಕಳಿಗೆ ಸುರಕ್ಷತೆ ಇರುವುದಿಲ್ಲ, ದೇಗುಲಗಳ ಮೇಲೆ ದಾಳಿಗಳಾಗಬಹುದು ಮತ್ತು ಸಮುದಾಯವನ್ನು ಗುರಿ ಮಾಡಬಹುದು’ ಎಂದು ಹೇಳಿದ್ದರು.
ಯೋಗಿ ಅವರ ಈ ಹೇಳಿಕೆಯ ಬಗ್ಗೆ ಮಹಾರಾಷ್ಟ್ರದ ಮಹಾಯತಿ ಭಾಗಿದಾರ ಪಕ್ಷ ಎನ್‌ಸಿಪಿ ಅಜಿತ್ ಪವಾರ್ ಬಣ ಅಂತರ ಕಾಯ್ದುಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.