ರಾಂಚಿ: ‘ನನ್ನ ಬಗ್ಗೆ ಅಪಪ್ರಚಾರ ನಡೆಸಿ ರಾಜಕೀಯ ಲಾಭ ಗಿಟ್ಟಿಸಿಕೊಳ್ಳಲು ಬಿಜೆಪಿಯು ₹500 ಕೋಟಿ ವ್ಯಯ ಮಾಡಿದೆ’ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮಂಗಳವಾರ ಗಂಭೀರ ಆರೋಪ ಮಾಡಿದ್ದಾರೆ.
‘ಒಂದು ಅಂದಾಜಿನ ಪ್ರಕಾರ, ಬಿಜೆಪಿಯು ನನ್ನ ಬಗ್ಗೆ ಸುಳ್ಳುಸುದ್ದಿ ಹರಡುವುದು ಹಾಗೂ ದ್ವೇಷದ ಪ್ರಚಾರಕ್ಕಾಗಿ ₹500 ಕೋಟಿ ವೆಚ್ಚ ಮಾಡಿದೆ. ಅಲ್ಲದೆ, ನನ್ನ ವಿರುದ್ಧ ಅಪಪ್ರಚಾರ ನಡೆಸಲಿಕ್ಕಾಗಿಯೇ ಬಿಹಾರ, ಛತ್ತೀಸಗಢ, ಒಡಿಶಾ ಹಾಗೂ ಪಶ್ಚಿಮ ಬಂಗಾಳದಿಂದ ಜನರನ್ನು ಕರೆತರಲಾಗಿದೆ’ ಎಂದು ಸೊರೇನ್ ಆರೋಪಿಸಿದ್ದಾರೆ.
‘ಜನರ ನಡುವೆ ದ್ವೇಷವನ್ನು ಹುಟ್ಟುಹಾಕುವ ಮೂಲಕ ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಈಡೇರಿಕೊಳ್ಳುವುದು ಯಾವುದೇ ನಾಯಕನಿಗೂ ಸುಲಭಸಾಧ್ಯ ಹಾಗೂ ಈ ವಿಷಯದಲ್ಲಿ ಬಿಜೆಪಿ ಅತಿ ನಿಪುಣ ಪಕ್ಷ. ಆದರೆ, ಈ ಕುತಂತ್ರಗಳನ್ನು ಜಾರ್ಖಂಡ್‌ನ ಸಂಸ್ಕೃತಿಯು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ನಾನು ಕೂಡ ಎಂದಿಗೂ ಇಂತಹ ವಾಮಮಾರ್ಗಗಳನ್ನು ಅನುಸರಿಸುವುದಿಲ್ಲ’ ಎಂದು ಸೊರೇನ್ ‘ಎಕ್ಸ್’ನಲ್ಲಿ ಹೇಳಿದ್ದಾರೆ.
ಬಿಜೆಪಿ ಕಾರ್ಯಕರ್ತರು ನನ್ನ ಬಗ್ಗೆ ಇಲ್ಲಸಲ್ಲದ ಸುದ್ದಿಗಳನ್ನು ಸ್ಥಳೀಯ ಮಟ್ಟದಲ್ಲಿ ಹರಡುತ್ತಿದ್ದಾರೆ. ಬಿಜೆಪಿಯು ನನ್ನ ಹೆಸರಿಗೆ ಮಸಿ ಬಳಿಯಲೆಂದೇ ವ್ಯವಸ್ಥಿತವಾಗಿ ಈ ಆಂದೋಲನವನ್ನು ರೂಪಿಸಿದೆ. ಇದಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿಯೂ ₹1 ಕೋಟಿಗೂ ಅಧಿಕ ಖರ್ಚು ಮಾಡಿದೆ ಎಂದು ಸೊರೇನ್ ಸೋಮವಾರ ಆರೋಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.