ನವದೆಹಲಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಭರ್ಜರಿ ಗೆಲುವು ಸಾಧಿಸಿದ್ದ ಬಿಜೆಪಿ, ಈ ಬಾರಿ ಅದಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಜಯ ಸಾಧಿಸಲು ಪಣ ತೊಟ್ಟಿದೆ.
ಚುನಾವಣೆಗಳಲ್ಲಿ ಗೆಲುವಿನ ನಾಗಾಲೋಟವನ್ನು ಮುಂದುವರಿಸಲು ‘ಅಜೇಯ ಬಿಜೆಪಿ’ ಎಂಬ ಧ್ಯೇಯ ವಾಕ್ಯವನ್ನೂ ಶನಿವಾರ ಆರಂಭವಾದ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಬಿಜೆಪಿ ಮೊಳಗಿಸಿದೆ.
ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಭಾರತವನ್ನು ಕಟ್ಟುವ (ಮೇಕಿಂಗ್ ಇಂಡಿಯಾ) ಕೆಲಸದಲ್ಲಿ ತೊಡಗಿದೆ. ಕಾಂಗ್ರೆಸ್ ದೇಶವನ್ನು ಒಡೆಯುವ ಕೆಲಸದಲ್ಲಿ (ಬ್ರೇಕಿಂಗ್ ಇಂಡಿಯಾ) ನಿರತವಾಗಿದೆ ಎಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಾಗ್ದಾಳಿ ನಡೆಸಿದರು.
2019ರ ಚುನಾವಣೆಯಲ್ಲಿ ಇದೇ ವಿಷಯ ಬಿಜೆಪಿ ಚುನಾವಣಾ ಪ್ರಚಾರದ ಪ್ರಬಲ ಅಸ್ತ್ರವಾಗಲಿದೆ ಎಂಬ ಸುಳಿವನ್ನು ಅವರು ಇದೇ ವೇಳೆ ನೀಡಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ 282 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ 2019ರಲ್ಲಿ ಅದಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ. ಬಿಜೆಪಿ ಸೋಲಿಸುವ ವಿರೋಧ ಪಕ್ಷಗಳ ಕನಸು ಕೇವಲ ಭ್ರಮೆ ಎಂದು ಶಾ ಲೇವಡಿ ಮಾಡಿದರು.
ಲೋಕಸಭಾ ಚುನಾವಣೆಯ ಜತೆಗೆ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಡ ಸೇರಿದಂತೆ ಮಿಜೋರಾಂ ಮತ್ತು ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದರು.
**
ಅಮಿತ್ ಶಾ ಮುಂದುವರಿಕೆ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಮೂರು ವರ್ಷಗಳ ಅಧಿಕಾರಾವಧಿ ಜನವರಿಯಲ್ಲಿ ಕೊನೆಗೊಳ್ಳಲಿದೆ.
ಆದರೆ, ಲೋಕಸಭಾ ಚುನಾವಣೆ ಮುಗಿಯುವವರೆಗೂ ಅವರು ಪಕ್ಷದ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲೋಕಸಭಾ ಚುನಾವಣೆ ಮುಗಿಯುವರೆಗೂ ಬಿಜೆಪಿ ಆಂತರಿಕ ಚುನಾವಣೆ ನಡೆಸದಿರಲು ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮೂಲಗಳುಹೇಳಿವೆ.
2016ರ ಜನವರಿಯಲ್ಲಿ ಶಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.
**
ಎರಡು ದಿನದಲ್ಲಿ ಬದಲಾವಣೆ: ಈಶ್ವರಪ್ಪ
‘ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆ ಉಂಟಾಗಲಿದೆ. ಎರಡು ದಿನ ಕಾದು ನೋಡಬೇಕಷ್ಟೇ’ ಎಂದು ಬಿಜೆಪಿ ಶಾಸಕ ಕೆ.ಎಸ್. ಈಶ್ವರಪ್ಪ ಅಭಿಪ್ರಾಯಪಟ್ಟರು.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ಶನಿವಾರ ಇಲ್ಲಿಗೆ ಆಗಮಿಸಿದ ಸಂದರ್ಭ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಡಿ.ಕೆ. ಶಿವಕುಮಾರ್ ಅವರು ಬಂಧನಕ್ಕೆ ಒಳಗಾಗಬಹುದು. ಸರ್ಕಾರವೇ ಬಿದ್ದು ಹೋಗಬಹುದು. ಅಂತಹ ಎಲ್ಲ ಸಾಧ್ಯತೆಗಳೂ ಇವೆ ಎಂದರು.
**
ಕಾಂಗ್ರೆಸ್ ಬಣ್ಣ ಬಯಲು
ಕೇಂದ್ರದ ಬಿಜೆಪಿ ಸರ್ಕಾರವು ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿರುವ ಸಂಸದ ಡಿ.ಕೆ. ಸುರೇಶ್ ಅವರು ಕಾಂಗ್ರೆಸ್ ಪಕ್ಷದ ನಿಜವಾದ ಬಣ್ಣವನ್ನು ಬಯಲು ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.
50ಕ್ಕೂ ಹೆಚ್ಚು ವರ್ಷಗಳ ಕಾಲ ದೇಶದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಜಾರಿ ನಿರ್ದೇಶನಾಲಯ, ಸಿಬಿಐ ಮತ್ತಿತರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡಿತ್ತು ಎಂದು ಸುರೇಶ್ ಅವರ ಹೇಳಿಕೆಯಿಂದಲೇ ಬಯಲಾಗಿದೆ ಎಂದು ಅವರು ಮೂದಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.