ನವದೆಹಲಿ: ಆಸ್ತಿ ಮರುಹಂಚಿಕೆ, ಪಿತ್ರಾರ್ಜಿತ ಆಸ್ತಿ ತೆರಿಗೆ ಕುರಿತ ಬಿಜೆಪಿಯ ಉತ್ಪಾದಿತ ಆರೋಪವು ಆ ಪಕ್ಷಕ್ಕೆ ಇರುವ ಆತಂಕವನ್ನು ತೋರುತ್ತಿದೆ. ಅಲ್ಲದೆ, ಸುಳ್ಳು ದೋಷಾರೋಪ ಮಾಡುವ ತಂತ್ರಕ್ಕೆ ಆ ಪಕ್ಷದವರು ಜೋತುಬಿದ್ದಿರುವುದು, ‘ಮೋದಿ ಕಿ ಗ್ಯಾರಂಟಿ’ ಹೇಳ ಹೆಸರಿಲ್ಲದಂತೆ ಆಗಿರುವುದಕ್ಕೂ ಸಾಕ್ಷಿಯಂತೆ ಕಾಣುತ್ತಿದೆ ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಪ್ರತಿಕ್ರಿಯಿಸಿದರು.
ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರೂ ಆಗಿದ್ದ ಚಿದಂಬರಂ ಅವರು ಗುರುವಾರ ತಮ್ಮ ಪಕ್ಷದ ಪ್ರಣಾಳಿಕೆಯು ಧರ್ಮಾಧಾರಿತವಾಗಿಲ್ಲ, ಸಾಮಾಜಿಕ ನ್ಯಾಯಕ್ಕೆ ಒತ್ತುನೀಡಿದೆ ಎಂದು ಸ್ಪಷ್ಟನೆ ನೀಡಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಜನರಲ್ಲಿ ಕಾಂಗ್ರೆಸ್ ಪ್ರಣಾಳಿಕೆಯು ಭರವಸೆ ಮೂಡಿಸುತ್ತದೆ ಎಂದೂ ಹೇಳಿದರು.
‘ಕಾಂಗ್ರೆಸ್ 1985ರಲ್ಲಿ ಆಸ್ತಿ ತೆರಿಗೆ ರದ್ದು ಮಾಡಿತ್ತು. 2015ರಲ್ಲಿ ಬಿಜೆಪಿಯು ಸಂಪತ್ತು ತೆರಿಗೆಯನ್ನು ರದ್ದುಪಡಿಸಿತ್ತು ಎನ್ನುವುದನ್ನು ನಾನು ಜನರಿಗೆ ನೆನಪಿಸಲು ಇಷ್ಟಪಡುತ್ತೇನೆ. ಆಸ್ತಿ ಮರುಹಂಚಿಕೆಯ ಪ್ರಸ್ತಾವ ನಮ್ಮ ಪ್ರಣಾಳಿಕೆಯಲ್ಲಿ ಇಲ್ಲ, ಸಾಮಾಜಿಕ–ಆರ್ಥಿಕ ದೃಷ್ಟಿಯಲ್ಲಿ ಜಾತಿ ಗಣತಿಗೆ ಒತ್ತು ನೀಡಲಾಗಿದೆ’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.