ADVERTISEMENT

ಉನ್ನಾವ್: ಅಪರಾಧಿ, ಮಾಜಿ ಶಾಸಕ ಸೆಂಗರ್ ಪತ್ನಿ ಜಿ.ಪಂ. ಅಭ್ಯರ್ಥಿ

ಬಿಜೆಪಿಯ ಕ್ರಮಕ್ಕೆ ಪಕ್ಷದವರಿಂದಲೇ ವಿರೋಧ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 12:12 IST
Last Updated 9 ಏಪ್ರಿಲ್ 2021, 12:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ಉತ್ತರ ಪ್ರದೇಶದ ಉನ್ನಾವ್‌ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿರುವ ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಅವರ ಪತ್ನಿಯನ್ನು ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಿಸಿದೆ.

ಉನ್ನಾವ್ ಜಿಲ್ಲೆಯ ಫತೇಫುರ್ ಚೌರಾಸಿಯ ಜಿಲ್ಲಾ ಪಂಚಾಯ್ತಿಯ ಸದಸ್ಯ ಸ್ಥಾನಕ್ಕೆ ಸೆಂಗರ್ ಅವರ ಪತ್ನಿ ಸಂಗೀತಾ ಸೆಂಗರ್ ಅವರು ಸ್ಪರ್ಧಿಸುತ್ತಿದ್ದಾರೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.

ಸಂಗೀತಾ ಅವರು ಈ ಹಿಂದೆ ಉನ್ನಾವ್ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ADVERTISEMENT

ಸಂಗೀತಾ ಅವರನ್ನು ಜಿಲ್ಲಾ ಪಂಚಾಯ್ತಿ ಅಭ್ಯರ್ಥಿಯನ್ನಾಗಿ ಘೋಷಿಸಿರುವ ಪಕ್ಷದ ಕ್ರಮಕ್ಕೆ ಸ್ಥಳೀಯ ನಾಯಕರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ಮತ್ತೊಂದೆಡೆ ಪಕ್ಷದ ಹಿರಿಯ ನಾಯಕರು ಈ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಉನ್ನಾವ್‌ನಲ್ಲಿ 17 ವರ್ಷದ ಬಾಲಕಿ ಮೇಲೆ 2017ರಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣದಲ್ಲಿ, ಕುಲದೀಪ್‌ ಸಿಂಗ್‌ ಸೆಂಗರ್‌ಗೆ ದೆಹಲಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

ಅತ್ಯಾಚಾರ ಪ್ರಕರಣ ನಡೆದು ಒಂದು ವರ್ಷದ ಬಳಿಕ ಅದು ಗಂಭೀರ ಸ್ವರೂಪ ಪಡೆದುಕೊಂಡ ನಂತರವಷ್ಟೇ ಬಿಜೆಪಿಯು ಸೆಂಗರ್‌ನನ್ನು ಪಕ್ಷದಿಂದ ಉಚ್ಚಾಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.