ನವದೆಹಲಿ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಹಿಂದುತ್ವವಾದಿ ನಾಯಕಿ ಆಗಿದ್ದರು. ಅವರ ನಿಧನದಿಂದ ತಮಿಳುನಾಡಿಗೆ ಆಗಿರುವ ನಷ್ಟವನ್ನು ಬಿಜೆಪಿಯು ತುಂಬುತ್ತಿದೆ ಎಂದು ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಅಭಿಪ್ರಾಯಪಟ್ಟಿದ್ದಾರೆ.
ಪಿಟಿಐ ಸಂಪಾದಕರ ಜತೆಗಿನ ಸಂವಾದದಲ್ಲಿ ಮಾತನಾಡಿದ ಅವರು, ‘ಜಯಲಲಿತಾ ಅವರು ಬದುಕಿರುವವರೆಗೂ ತಮಿಳುನಾಡಿನಲ್ಲಿ ಇತರ ಎಲ್ಲರಿಗಿಂತ ಶ್ರೇಷ್ಠ ಹಿಂದುತ್ವವಾದಿ ನಾಯಕಿ ಆಗಿದ್ದರು. 2014ಕ್ಕೂ ಮುನ್ನ ಒಂದು ಪಕ್ಷವಾಗಿ ಬಿಜೆಪಿ ಮತ್ತು ಒಬ್ಬರು ನಾಯಕಿಯಾಗಿ ಜಯಲಲಿತಾ ಅವರು ನಿಮ್ಮ ಮುಂದೆ ಇದ್ದಾಗ, ಹಿಂದೂ ಮತದಾರರ ಸಹಜ ಅಯ್ಕೆ ಜಯಲಲಿತಾ ಆಗಿರುತ್ತಿದ್ದರು. ಅವರು ತಮ್ಮ ಹಿಂದುತ್ವದ ಪರ ಒಲವನ್ನು ಬಹಿರಂಗವಾಗಿಯೇ ಪ್ರದರ್ಶಿಸಿದ್ದರು’ ಎಂದು ಹೇಳಿದರು.
ಬಿಜೆಪಿ ನಾಯಕರನ್ನು ಹೊರತುಪಡಿಸಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬೆಂಬಲ ಸೂಚಿಸಿದ ದೇಶದ ಮೊದಲ ರಾಜಕಾರಣಿ ಜಯಲಲಿತಾ ಆಗಿದ್ದರು ಮತ್ತು 2002-03ರಲ್ಲಿ ತಮಿಳುನಾಡಿನಲ್ಲಿ ಮತಾಂತರ ವಿರೋಧಿ ಕಾನೂನು ಜಾರಿಗೊಳಿಸಿದ್ದರು ಎಂದು ತಿಳಿಸಿದರು.
ಜಯಲಲಿತಾ ಅವರು 2016 ರಲ್ಲಿ ನಿಧನರಾದ ಬಳಿಕ ಎಐಎಡಿಎಂಕೆಯು ಹಿಂದುತ್ವ ಆದರ್ಶಗಳಿಂದ ದೂರ ಸರಿಯಿತಲ್ಲದೆ, ಪಿಎಫ್‌ಐನ ರಾಜಕೀಯ ಸಂಘಟನೆಯಾಗಿರುವ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಜತೆ ಕೈಜೋಡಿಸಿತು ಎಂದು ಆರೋಪಿಸಿದರು.
‘ತಮಿಳುನಾಡಿನಲ್ಲಿ ಹಿಂದೂಗಳು ತಮ್ಮ ದೇವಸ್ಥಾನವನ್ನು ರಕ್ಷಿಸುವ ಪಕ್ಷವೊಂದನ್ನು ಹುಡುಕುತ್ತಿದ್ದರೆ, ಅವರ ಮುಂದಿರುವ ಆಯ್ಕೆ ಬಿಜೆಪಿ ಆಗಿದೆ. ಏಕೆಂದರೆ ಎಐಎಡಿಎಂಕೆಯು ಜಯಲಲಿತಾ ಅವರು ಹೊಂದಿದ್ದ ಸಿದ್ಧಾಂತದಿಂದ ದೂರ ಸರಿದಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.