ಲಖನೌ: 'ಬಿಜೆಪಿಯು ತಾನು ನೀಡಿದ್ದ ಭರವಸೆಯನ್ನು ಈಡೇರಿಸಿದೆ. ಇದೀಗ ನಿಮ್ಮ ಸರದಿ' ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಆ ಮೂಲಕ, ಉಪ ಚುನಾವಣೆಯಲ್ಲಿ ಕೇಸರಿ ಪಕ್ಷವನ್ನು ಗೆಲ್ಲಿಸಬೇಕು ಎಂಬ ಸಂದೇಶವನ್ನು ಅಯೋಧ್ಯೆಯ ಜನರಿಗೆ ರವಾನಿಸಿದ್ದಾರೆ.
ದೀಪಾವಳಿ ಅಂಗವಾಗಿ ಬುಧವಾರ ಮತ್ತು ಗುರುವಾರ ಆಯೋಜನೆಯಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ಯೋಗಿ, 'ಡಬಲ್ ಎಂಜಿನ್ ಸರ್ಕಾರವು ತನ್ನ ಭರವಸೆಯನ್ನು ಈಡೇರಿಸಿದೆ. ರಾಮ ಮಂದಿರ ನಿರ್ಮಾಣವಾಗಿದೆ. ಬಾಲ ರಾಮ ನೆಲೆಸಿದ್ದಾನೆ. ಇದೀಗ ಅಯೋಧ್ಯೆಯ ಸರದಿ. ರಾಮನ ಪತ್ನಿ ಸೀತಾಮಾತೆಯನ್ನು ಮತ್ತೆ ಮತ್ತೆ ಪರೀಕ್ಷೆಗೆ ಒಳಪಡಿಸಬಾರದು' ಎಂದು ಸಲಹೆ ನೀಡಿದ್ದಾರೆ.
ಹಿಂದೂ ಪುರಾಣಗಳ ಪ್ರಕಾರ, ಶ್ರೀರಾಮನ ಪತ್ನಿ ಸೀತಾದೇವಿಯು ತಮ್ಮ ಪಾವಿತ್ರ್ಯತೆ ಸಾಬೀತು ಮಾಡಲು ಅಗ್ನಿಪ್ರವೇಶ ಮಾಡಿದ್ದರು ಎಂದು ನಂಬಲಾಗಿದೆ.
ಅಯೋಧ್ಯೆಯು ಫೈಜಾಬಾದ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಫೈಜಾಬಾದ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯು ಪರಾಭವಗೊಂಡಿದ್ದರು. ಈ ಸೋಲು ಬಿಜೆಪಿಗೆ ಭಾರಿ ಮುಖಭಂಗ ಉಂಟುಮಾಡಿದೆ.
ಮಿಲ್ಕಿಪುರ ಶಾಸಕರಾಗಿದ್ದ ಸಮಾಜವಾದಿ ಪಕ್ಷದ (ಎಸ್‌ಪಿ) ಅವದೇಶ್ ಪ್ರಸಾದ್ ಅವರು, ಬಿಜೆಪಿಯ ಲಲ್ಲು ಸಿಂಗ್ ಅವರನ್ನು 48,000 ಮತಗಳಿಂದ ಮಣಿಸಿದ್ದರು. ಪ್ರಸಾದ್ ಅವರಿಂದ ತೆರವಾದ ಕ್ಷೇತ್ರಕ್ಕೆ ಇದೀಗ ಉಪ ಚುನಾವಣೆ ನಡೆಯಲಿದೆ.
ಇದೇ ಕಾರಣಕ್ಕಾಗಿ ಯೋಗಿ ಅವರು, ಸೀತೆಯನ್ನು ಮತ್ತೆ ಮತ್ತೆ ಪರೀಕ್ಷಿಸಬಾರದು ಎಂದಿದ್ದಾರೆ ಎನ್ನಲಾಗಿದೆ.
ಜನರು ಜಾತಿ, ಭಾಷೆ, ಧರ್ಮದ ಆಧಾರದಲ್ಲಿ ವಿಭಜನೆಯಾಗಬಾರದು. ಸನಾತನ ಧರ್ಮವನ್ನು ಸದೃಢಗೊಳಿಸುವ ಸಲುವಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಮನವಿ ಮಾಡಿದ ಮುಖ್ಯಮಂತ್ರಿ, ಭಗವಂತ ಹನುಮಂತನ ಗದೆಯು ಸನಾತನ ಧರ್ಮವನ್ನು ರಕ್ಷಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.