ಲಖನೌ: ಮುಂಬರುವ ವಿಧಾನಸಭೆ ಉಪಚುನಾವಣೆಗೂ ಮುನ್ನ ಮತ ಬ್ಯಾಂಕ್ ರಾಜಕಾರಣ ಮಾಡಲು ಯತ್ನಿಸುತ್ತಿರುವ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ತಮ್ಮ ಪಕ್ಷದ ಹೆಸರು ಕೆಡಿಸಲು ಪ್ರಯತ್ನಿಸುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
ಬಿಜೆಪಿ ಏನೇ ಮಾಡಿದರು, ಜನರು ಆ ಪಕ್ಷದ ಮೇಲಿನ ನಂಬಿಕೆ ಕಳೆದುಕೊಂಡಿದ್ದಾರೆ. ಹಾಗಾಗಿ ಬಿಜೆಪಿ ನಾಶ ನಿಶ್ಚಿತ ಎಂದು ಅವರು ಹೇಳಿದ್ದಾರೆ.
ಅಯೋಧ್ಯೆ ಸಾಮೂಹಿಕ ಅತ್ಯಾಚಾರ ಪ್ರಕರಣ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಂಬರುವ ವಿಧಾನಸಭೆ ಉಪಚುನಾವಣೆಗೂ ಮುನ್ನ, ಪಿತೂರಿ ನಡೆಸಿ ಸಮಾಜವಾದಿಗಳ ಹೆಸರು ಕೆಡಿಸಲು ಬಿಜೆಪಿ ಮುಂದಾಗಿದೆ. ಮುಸ್ಲಿಮರ ಬಗ್ಗೆ ಅವರ ಆಲೋಚನೆಗಳು ಪ್ರಜಾಪ್ರಭುತ್ವ ವಿರೋಧಿಯಾಗಿವೆ’ ಎಂದು ತಿಳಿಸಿದ್ದಾರೆ.
‘ಏಳು ವರ್ಷಕ್ಕೂ ಅಧಿಕ ಶಿಕ್ಷೆ ಇರುವ ಅಪರಾಧ ಮಾಡಿದ್ದಲ್ಲಿ, ಡಿಎನ್ಎ ಪರೀಕ್ಷೆ ನಡೆಸಬೇಕು ಎಂದು 2023ರಲ್ಲಿ ಜಾರಿಗೆ ತಂದ ಕಾನೂನಿನಲ್ಲಿ ಹೇಳಲಾಗಿದೆ. ಹಾಗಿರುವಾಗ ನಮ್ಮ ಬೇಡಿಕೆಯಲ್ಲಿ ತಪ್ಪೇನಿದೆ’ ಎಂದು ಅಖಿಲೇಶ್ ಪ್ರಶ್ನಿಸಿದ್ದಾರೆ.
12 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಆರೋಪಿಗಳಿಬ್ಬರ ಡಿಎನ್‌ಎ ಪರೀಕ್ಷೆಗೆ ಅಖಿಲೇಶ್ ಯಾದವ್ ಬೇಡಿಕೆ ಇಟ್ಟಿದ್ದರು.
ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮೊಯಿದ್ ಖಾನ್ ಪ್ರಮುಖ ಆರೋಪಿಯಾಗಿದ್ದು, ಸಮಾಜವಾದಿ ಪಕ್ಷದ ಸದಸ್ಯನಾಗಿದ್ದಾನೆ. ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಯೋಧ್ಯೆ ಜಿಲ್ಲೆಯ ಬಾದರಸಾ ನಗರದಲ್ಲಿ ಬೇಕರಿ ನಡೆಸುತ್ತಿದ್ದ ಆರೋಪಿಗಳಾದ ಮೊಯಿದ್ ಖಾನ್, ಆತನ ನೌಕರ ರಾಜು ಖಾನ್‌ನನ್ನು ಜುಲೈ 30ರಂದು ಪೊಲೀಸರು ಬಂಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.