ಲಖನೌ: ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಇಂದು (ಬುಧವಾರ) ನಡೆದ ಭೀಕರ ರಸ್ತೆ ಅಪಘಾತಕ್ಕೆ ಬಿಜೆಪಿ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಹಾಲಿನ ಟ್ಯಾಂಕರ್‌ಗೆ ದೆಹಲಿಯಿಂದ ಬಿಹಾರದತ್ತ ಸಾಗುತ್ತಿದ್ದ ಡಬಲ್ ಡೆಕ್ಕರ್ ಸ್ಲೀಪರ್ ಬಸ್ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ 18 ಮಂದಿ ಮೃತಪಟ್ಟು, 19 ಮಂದಿ ಗಾಯಗೊಂಡಿದ್ದರು.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅಖಿಲೇಶ್, ತನಿಖೆಗೆ ಆಗ್ರಹಿಸಿದ್ದಾರೆ. 'ಎಕ್ಸ್‌ಪ್ರೆಸ್‌ವೇಯಲ್ಲಿ ವಿಶೇಷ ಪಾರ್ಕಿಂಗ್ ವ್ಯವಸ್ಥೆ ಇದ್ದರೂ ರಸ್ತೆಯ ಮಧ್ಯದಲ್ಲೇ ವಾಹನ ಹೇಗೆ ನಿಲುಗಡೆಗೊಳಿಸಲಾಯಿತು ? ಸಿಸಿಟಿವಿ ಇದ್ದರೂ ಏಕೆ ಗಮನಕ್ಕೆ ಬಂದಿಲ್ಲ? ಸಿಸಿಟಿವಿ ಕಾರ್ಯಾಚರಿಸುತ್ತಿಲ್ಲವೇ' ಎಂದು ಪ್ರಶ್ನಿಸಿದ್ದಾರೆ.
'ಹೈವೇ ಪೊಲೀಸರು ಎಲ್ಲಿದ್ದರು? ಗಸ್ತು ತಿರುಗಲಿಲ್ಲವೇ? ಅಪಘಾತದ ಬಳಿಕವೂ ಆಂಬುಲೆನ್ಸ್ ಬರಲು ಏಕೆ ತಡವಾಯಿತು' ಎಂದು ಹೇಳಿದ್ದಾರೆ.
'ವಾಹನ ಬ್ರೇಕ್ ಡೌನ್ ಆಗಿದ್ದರೆ ಟೋಯಿಂಗ್ ವಾಹನ ಏಕೆ ಬರಲಿಲ್ಲ? ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರತಿದಿನ ಕೋಟ್ಯಂತರ ರೂಪಾಯಿ ಸಂಗ್ರಹವಾಗುತ್ತಿದೆ. ಈ ದುಡ್ಡು ಎಕ್ಸ್‌ಪ್ರೆಸ್‌ವೇ ನಿರ್ವಹಣೆಗೆ ಬಳಸದಿದ್ದರೆ ಇನ್ನೆಲ್ಲಿಗೆ ಹೋಗುತ್ತದೆ' ಎಂದು ಕೇಳಿದ್ದಾರೆ.
ಅಖಿಲೇಶ್ ಯಾದವ್ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇ ನಿರ್ಮಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.