ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬೇರೆಬೇರೆ ಪಕ್ಷಗಳ ಒಟ್ಟು 277 ಶಾಸಕರನ್ನು ಬಿಜೆಪಿ ಖರೀದಿ ಮಾಡಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಶುಕ್ರವಾರ ಆರೋಪಿಸಿದ್ದಾರೆ.
ದೆಹಲಿ ವಿಧಾನಸಭೆಯಲ್ಲಿ ಮಾತನಾಡಿದ ಅವರು 'ಆಪರೇಷನ್ ಕಮಲ' ವಿಚಾರವಾಗಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಲೆಗಳು ಏರಿಯಾಗುತ್ತಲೇ ಇವೆ. ಪೆಟ್ರೋಲ್ ಮತ್ತು ಡೀಸೆಲ್, ಅಡುಗೆ ಅನಿಲ ದರ ಹೆಚ್ಚಾಗುತ್ತಿವೆ. ಹಾಲು, ಮೊಸರು, ತುಪ್ಪ, ಗೋಧಿ ಸೇರಿದಂತೆ ಎಲ್ಲದರ ಮೇಲೂ ಜಿಎಸ್‌ಟಿ ಹಾಕಲಾಗಿದೆ. ಈ ಹಣವನ್ನು ಎರಡು ವಿಚಾರಗಳಿಗೆ ಬಳಸಲಾಗುತ್ತಿದೆ. ಒಂದು ಅವರ ಶ್ರೀಮಂತ ಸ್ನೇಹಿತರ ಸಾಲ ತೀರಿಸಲು ಹಾಗೂ ಮತ್ತೊಂದು, ಶಾಸಕರನ್ನು ಖರೀದಿಸಲು ಎಂದು ಕಿಡಿಕಾರಿದ್ದಾರೆ.
ಮುಂದುವರಿದು, ಬಿಜೆಪಿಯು ಹಣ ಬಳಸಿ ಹಲವು ಸರ್ಕಾರಗಳನ್ನು ಬುಡಮೇಲು ಮಾಡಿದೆ. ಸರ್ಕಾರಗಳನ್ನು ಒಂದಾದಮೇಲೊಂದರಂತೆ ಉರುಳಿಸುವ ಸರಣಿ ಹಂತಕನಂತೆ ವರ್ತಿಸುತ್ತಿದೆ. ಜನರು ಚುನಾಯಿಸಿದ ಸರ್ಕಾರವನ್ನು ಅವರು (ಬಿಜೆಪಿಯವರು) ಕೆಡವುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಕೇಜ್ರಿವಾಲ್ ಅವರು,ಪಕ್ಷದಲ್ಲಿ ಭಿನ್ನಮತವಿಲ್ಲ ಎಂಬುದನ್ನು ಸಾಬೀತು ಮಾಡಲು ಆಗಸ್ಟ್ 29ರಂದು ವಿಶ್ವಾಸಮತ ಯಾಚಿಸುವುದಾಗಿ ತಿಳಿಸಿದ್ದಾರೆ. ಸದನವನ್ನು ಅಲ್ಲಿಯವರೆಗೆ ಮುಂದೂಡಲಾಗಿದೆ.
ಬಿಜೆಪಿಯು ದೆಹಲಿ ಸರ್ಕಾರವನ್ನು ಕೆಡವಲು 'ಆಪರೇಷನ್ ಕಮಲ' ನಡೆಸುತ್ತಿದೆ. ಬಿಜೆಪಿ ಸೇರಿದರೆ ತಲಾ ₹ 20 ಕೋಟಿಯಂತೆ, ₹ 800 ಕೋಟಿ ನೀಡುವುದಾಗಿ ನಮ್ಮ 40 ಶಾಸಕರಿಗೆ ಆಮಿಷ ಒಡ್ಡಲಾಗಿದೆ ಎಂದು ಎಎಪಿ ಇತ್ತೀಚೆಗೆ ಆರೋಪಿಸಿತ್ತು.
ಇದರ ಬೆನ್ನಲ್ಲೇ ಈ ವಿಚಾರವಾಗಿ ಪಕ್ಷದಶಾಸಕರೊಂದಿಗೆ ಚರ್ಚಿಸಲು ಮುಖ್ಯಮಂತ್ರಿ ಕೇಜ್ರಿವಾಲ್ ತಮ್ಮ ನಿವಾಸದಲ್ಲಿ ಗುರುವಾರ (ಆ.25ರಂದು) ಸಭೆ ನಡೆಸಿದ್ದರು. ಸಭೆ ಬಳಿಕ ಎಲ್ಲರೊಂದಿಗೆ ರಾಜ್‌ಘಾಟ್‌ಗೆ ತೆರಳಿ ಬಿಜೆಪಿಯ 'ಆಪರೇಷನ್ ಕಮಲ' ವಿಫಲವಾಗಲಿ ಎಂದು ಪ್ರಾರ್ಥಿಸಿದ್ದರು.
ಇವನ್ನೂ ಓದಿ
*ಬಿಜೆಪಿಯಿಂದ ಎಎಪಿಯ 40 ಶಾಸಕರಿಗೆ ತಲಾ ₹20 ಕೋಟಿ ಆಮಿಷ: ಆರೋಪ
*ಎಎಪಿ ಶಾಸಕರಿಗೆ ಬಿಜೆಪಿ ಆಮಿಷ ಒಡ್ಡಿದ ₹800 ಕೋಟಿಯ ಮೂಲವೇನು? –ಕೇಜ್ರಿವಾಲ್
*ಸಂಪಾದಕೀಯ: ಸಿಸೋಡಿಯಾ ಮೇಲೆ ಸಿಬಿಐ ಕ್ರಮ ದ್ವೇಷ ರಾಜಕಾರಣಕ್ಕೆ ಇನ್ನೊಂದು ನಿದರ್ಶನ
*ಬಿಜೆಪಿಯಿಂದ ಹನಿಟ್ರ್ಯಾಪ್ ಸಂಚು ಆರೋಪ: ವಾಟ್ಸ್ಆ್ಯಪ್ ಸಂದೇಶ ಹಂಚಿಕೊಂಡ ಎಎಪಿ ಶಾಸಕ
*ಕೇಜ್ರಿವಾಲ್ ಮಹತ್ವದ ಸಭೆಗೂ ಮುನ್ನ ಸಂಪರ್ಕಕ್ಕೆ ಸಿಗದ ಕನಿಷ್ಠ 12 ಎಎಪಿ ಶಾಸಕರು
*ರಾಜ್ಯ ಸರ್ಕಾರಗಳನ್ನು ಉರುಳಿಸುವ ಸರಣಿ ಹಂತಕನಂತೆ ವರ್ತಿಸುತ್ತಿರುವ ಬಿಜೆಪಿ: ಎಎಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.