ADVERTISEMENT

ಬಿಜೆಪಿಯಿಂದ ಕೇಜ್ರಿವಾಲ್‌ ಕೊಲೆಗೆ ಸಂಚು: ತನಿಖೆಗೆ ಮನೀಶ್‌ ಸಿಸೋಡಿಯಾ ಒತ್ತಾಯ

ಪಿಟಿಐ
Published 25 ನವೆಂಬರ್ 2022, 7:10 IST
Last Updated 25 ನವೆಂಬರ್ 2022, 7:10 IST
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ | ಪಿಟಿಐ ಚಿತ್ರ
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ | ಪಿಟಿಐ ಚಿತ್ರ   

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಕೊಲೆಗೆ ಬಿಜೆಪಿ ಸಂಚು ಹೂಡಿದೆ ಎಂದು ಆರೋಪಿಸಿರುವ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರು ತನಿಖೆಗೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸುವುದಾಗಿಯೂ ತಿಳಿಸಿದ್ದಾರೆ.

ಗುಜರಾತ್‌ ಮತ್ತು ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಅರವಿಂದ ಕೇಜ್ರಿವಾಲ್‌ ಅವರನ್ನು ಹತ್ಯೆ ಮಾಡಲು ಬಿಜೆಪಿ ಸಂಚು ರೂಪಿಸಿದೆ. ಇದರಲ್ಲಿ ದೆಹಲಿ ಸಂಸದ ಮನೋಜ್‌ ತಿವಾರಿ ಅವರು ಭಾಗಿಯಾಗಿದ್ದಾರೆ ಎಂದು ಸಿಸೋಡಿಯಾ ಗುರುವಾರ ಆಪಾದಿಸಿದ್ದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಸೋಡಿಯಾ, ಬಿಜೆಪಿ ನಾಯಕ ಮನೋಜ್‌ ತಿವಾರಿ ಅವರು ಸಿಎಂ ಅರವಿಂದ ಕೇಜ್ರಿವಾಲ್‌ ವಿರುದ್ಧ ಅಂತಹ ಭಾಷೆಯನ್ನು ಬಳಸಿರುವುದು ಬಹಿರಂಗ ಬೆದರಿಕೆಯಾಗಿದೆ ಎಂದರು.

ADVERTISEMENT

ಮನೋಜ್‌ ತಿವಾರಿ ಅವರು ಬಳಸಿರುವ ಭಾಷೆಯು ಅರವಿಂದ ಕೇಜ್ರಿವಾಲ್‌ ಅವರ ಕೊಲೆಗೆ ಸಂಚು ರೂಪಿಸಿರುವ ರಹಸ್ಯವನ್ನು ಹೊರಗೆಡವಿದೆ. ಬೆದರಿಕೆ ಒಡ್ಡಿರುವ ತಿವಾರಿ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸುತ್ತೇವೆ ಎಂದು ಸಿಸೋಡಿಯಾ ಹೇಳಿದರು.

ಇಂತಹ ಕೀಳು ಮಟ್ಟದ ರಾಜಕೀಯಕ್ಕೆ ಎಎಪಿ ಹೆದರುವುದಿಲ್ಲ ಎಂದರು.

ಆರೋಪಕ್ಕೆ ಪ್ರತಿಕ್ರಿಯಿಸಿರುವ ಮನೋಜ್‌ ತಿವಾರಿ, ನಾನು ಅರವಿಂದ ಕೇಜ್ರಿವಾಲ್‌ ಅವರ ಸುರಕ್ಷತೆ ಬಗ್ಗೆ ಕಾಳಜಿ ಹೊಂದಿದ್ದೇನೆ. ಕೇಜ್ರಿವಾಲ್‌ ಅವರನ್ನು ಕೊಲ್ಲಲು ಬಿಜೆಪಿ ಸಂಚು ರೂಪಿಸಿದೆ ಎಂಬ ಹಳೆಯ ಕಟ್ಟುಕತೆಯನ್ನು ಸಿಸೋಡಿಯಾ ಅವರು ಓದುತ್ತಿದ್ದಾರೆ ಎಂದರು.

ಒಂದೆಡೆ ಸಿಸೋಡಿಯಾ ಅವರನ್ನು ಬಂಧಿಸಲಾಗುತ್ತದೆ ಎಂದು ಕೇಜ್ರಿವಾಲ್‌ ಹೇಳುತ್ತಾರೆ. ಇನ್ನೊಂದೆಡೆ ಕೇಜ್ರಿವಾಲ್‌ ಅವರ ಹತ್ಯೆ ಬಗ್ಗೆ ಸಿಸೋಡಿಯಾ ಅವರು ಶಕುನ ನುಡಿಯುತ್ತಾರೆ. ಇಲ್ಲಿ ಏನಾಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ ಎಂದು ತಿವಾರಿ ಪ್ರತಿಕ್ರಿಯಿಸಿದ್ದಾರೆ.

ಮನೋಜ್‌ ತಿವಾರಿ ಹೇಳಿದ್ದೇನು?
ಅರವಿಂದ ಕೇಜ್ರಿವಾಲ್‌ ಅವರ ಭದ್ರತೆ ಬಗ್ಗೆ ಕಳವಳಗೊಂಡಿದ್ದೇನೆ. ಭ್ರಷ್ಟಾಚಾರ, ಎಂಸಿಡಿ ಚುನಾವಣೆಗೆ ಟಿಕೆಟ್‌ಗಳ ಮಾರಾಟ, ಅತ್ಯಾಚಾರಿಗಳ ಜೊತೆಗಿನ ಸ್ನೇಹ ಮತ್ತು ಜೈಲಿನಲ್ಲಿ ಮಸಾಜ್‌ ಮಾಡಿಸಿಕೊಳ್ಳುತ್ತಿರುವಂತಹ ವಿಚಾರಗಳಿಂದ ಜನರು ಮತ್ತು ಎಎಪಿ ಕಾರ್ಯಕರ್ತರು ಕೋಪಗೊಂಡಿದ್ದಾರೆ. ಅವರ ಶಾಸಕರ ಮೇಲೆ ಹಲ್ಲೆಯೂ ನಡೆದಿದೆ. ಇದು ದೆಹಲಿಯ ಮುಖ್ಯಮಂತ್ರಿಗಳಿಗೆ ಸಂಭವಿಸಬಾರದು ಎಂದು ಮನೋಜ್‌ ತಿವಾರಿ ಟ್ವೀಟ್‌ ಮಾಡಿದ್ದರು.

ಮೂಲಗಳ ಪ್ರಕಾರ, ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ. ಸಕ್ಸೇನಾ ಅವರು ಕೊಲೆ ಆರೋಪಕ್ಕೆ ಸಂಬಂಧಿಸಿ ಗಮನ ಹರಿಸುವಂತೆ ನಗರ ಪೊಲೀಸ್‌ ಕಮಿಷನರ್‌ ಅವರಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.