ನವದೆಹಲಿ: ಬಿಜೆಪಿಯವರು ಪ್ರವಾದಿ ಮಹಮ್ಮದ್, ಮುಸ್ಲಿಮರನ್ನು ವಿರೋಧಿಸುತ್ತಿದ್ದಾರೆ ಎಂದುಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಆರೋಪಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್ ನಿರ್ದಿಷ್ಟ ಧರ್ಮವೊಂದರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವುದನ್ನು ನಾನು ಖಂಡಿಸುತ್ತೇನೆ’ಎಂದು ಹೇಳಿದ್ದಾರೆ.
‘ಹೈದರಾಬಾದ್‌ನಲ್ಲಿ ಶಾಂತಿ ನೆಲೆಸಿರುವುದು ಬಿಜೆಪಿಯವರಿಗೆ ಇಷ್ಟವಿಲ್ಲ. ಅವರು (ಬಿಜೆಪಿ) ಪ್ರವಾದಿ ಮಹಮ್ಮದ್ ಮತ್ತು ಮುಸ್ಲಿಮರನ್ನು ದ್ವೇಷಿಸುತ್ತಿದ್ದು, ಭಾರತದ ಸಾಮಾಜಿಕ ವ್ಯವಸ್ಥೆಯನ್ನು ನಾಶಮಾಡಲು ಬಯಸುತ್ತಿದ್ದಾರೆ’ ಎಂದು ಓವೈಸಿ ವಾಗ್ದಾಳಿ ನಡೆಸಿದ್ದಾರೆ.
‘ಪ್ರವಾದಿ ಮಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರು ಮುಂದಿನ ದಿನಗಳಲ್ಲಿ ದೆಹಲಿ ಸಿಎಂ ಅಭ್ಯರ್ಥಿ ಸ್ಥಾನಕ್ಕೆ ಸ್ಪರ್ಧಿಸಬಹುದು’ ಎಂದು ಇತ್ತೀಚೆಗೆ ಓವೈಸಿ ಹೇಳಿದ್ದರು.
‘ಮುಸ್ಲಿಮರನ್ನು ನಿಂದಿಸುವವರಿಗೆ ಬಿಜೆಪಿ ಪಕ್ಷದಲ್ಲಿ ದೊಡ್ಡ ಹುದ್ದೆಗಳು ಸಿಗುತ್ತವೆ. ಹಾಗಾಗಿ ನೂಪುರ್ ಶರ್ಮಾ ಅವರನ್ನು ದೆಹಲಿಯ ಸಿಎಂ ಅಭ್ಯರ್ಥಿಯನ್ನಾಗಿ ಮಾಡುವುದರಲ್ಲಿ ಅಚ್ಚರಿ ಇಲ್ಲ ಎಂದಿದ್ದ ಓವೈಸಿ, ‘ಬಿಜೆಪಿಯವರು ನೂಪುರ್ ಶರ್ಮಾ ಅವರನ್ನು ಮುಂದಿನ ಆರು ತಿಂಗಳಲ್ಲಿ ದೊಡ್ಡ ನಾಯಕಿಯನ್ನಾಗಿ ಮಾಡಲಿದ್ದಾರೆ’ ಎಂದು ಟೀಕಿಸಿದ್ದರು.
ಇತ್ತೀಚೆಗೆ ಹೈದರಾಬಾದ್‌ನಲ್ಲಿ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಮುನವ್ವರ್ ಫಾರೂಕಿ ನಡೆಸಿಕೊಟ್ಟಿದ್ದ ಕಾರ್ಯಕ್ರಮವೊಂದರ ಬಗ್ಗೆ ಟೀಕಿಸಿ ವಿಡಿಯೊ ತುಣುಕನ್ನು ರಾಜಾ ಸಿಂಗ್ ಸೋಮವಾರ ಬಿಡುಗಡೆ ಮಾಡಿದ್ದರು. ಅದರಲ್ಲಿ ಧರ್ಮದ ವಿರುದ್ಧ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಈ ವಿಚಾರವಾಗಿ ರಾಜಾ ಸಿಂಗ್ ವಿರುದ್ಧ ಸೋಮವಾರ ರಾತ್ರಿ ಹೈದರಾಬಾದ್‌ನಲ್ಲಿ ಪ್ರತಿಭಟನೆ ನಡೆದಿತ್ತು. ಸಿಂಗ್ ಅವರನ್ನು ಬಂಧಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದರು.
ವಿವಾದಾತ್ಮಕ ಹೇಳಿಕೆ ನೀಡಿದ ಆರೋಪ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ರಾಜಾ ಸಿಂಗ್ ಅವರನ್ನು ತೆಲಂಗಾಣ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.