ADVERTISEMENT

ಸಾರ್ವಜನಿಕರ ಹಣ ವೈಯಕ್ತಿಕ ಸೌಕರ್ಯಕ್ಕೆ ಬಳಕೆ: ಕೇಜ್ರಿವಾಲ್ ವಿರುದ್ಧ ಬಿಜೆಪಿ ಆರೋಪ

ಪಿಟಿಐ
Published 22 ಅಕ್ಟೋಬರ್ 2024, 8:32 IST
Last Updated 22 ಅಕ್ಟೋಬರ್ 2024, 8:32 IST
ಅರವಿಂದ ಕೇಜ್ರಿವಾಲ್‌
ಅರವಿಂದ ಕೇಜ್ರಿವಾಲ್‌   

ನವದೆಹಲಿ: ಆಮ್‌ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್‌ ಅವರು ದೆಹಲಿ ಮುಖ್ಯಮಂತ್ರಿಯಾಗಿದ್ದಾಗ ತೆರಿಗೆದಾರರ ಹಣವನ್ನು ವೈಯಕ್ತಿಕ ಸೌಕರ್ಯಕ್ಕಾಗಿ ಬಳಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಫ್ಲ್ಯಾಗ್‌ಸ್ಟ್ಯಾಫ್‌ ರಸ್ತೆಯಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ದುಬಾರಿ ಬೆಲೆಯ ವಸ್ತುಗಳು ಮತ್ತು ಆಧುನಿಕ ಸೌಲಭ್ಯಗಳಿಗಾಗಿ ಕೇಜ್ರಿವಾಲ್‌ ಕೋಟಿಗಟ್ಟಲೆ ವ್ಯಯಿಸಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

‘ಫ್ಲ್ಯಾಗ್‌ಸ್ಟ್ಯಾಫ್‌ ರಸ್ತೆಯಲ್ಲಿರುವ ಬಂಗಲೆಯಲ್ಲಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಅಳವಡಿಸಲಾಗಿದ್ದ 15 ಟಾಯ್ಲೆಟ್‌ ಸೀಟ್‌ಗಳು ನಾಪತ್ತೆಯಾಗಿವೆ. ₹12 ಲಕ್ಷ ಮೌಲ್ಯದ ಟಾಯ್ಲೆಟ್‌ ಸೀಟ್‌ಗಳಿಗೆ ತೆರಿಗೆದಾರರ ಹಣವನ್ನು ಕೇಜ್ರಿವಾಲ್‌ ಹೇಗೆ ಖರ್ಚು ಮಾಡಿದರು ಎಂಬುದನ್ನು ಜನರಿಗೆ ತಿಳಿಸಲು ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ಅಂತಹ 15 ಟಾಯ್ಲೆಟ್‌ ಸೀಟ್‌ಗಳನ್ನು ಕದ್ದಿದ್ದಾರೆ’ ಎಂದು ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ ಆರೋಪಿಸಿದ್ದಾರೆ.

ADVERTISEMENT

‘ಅರವಿಂದ ಕೇಜ್ರಿವಾಲ್‌ ಅವರಿಗೆ ಮುಖ್ಯಮಂತ್ರಿ ನಿವಾಸದಲ್ಲಿ ಐಷಾರಾಮಿ ವಾಸ್ತವ್ಯವನ್ನು ಒದಗಿಸಲು ಖರ್ಚು ಮಾಡಿರುವ ತೆರಿಗೆದಾರರ ಕೋಟ್ಯಂತರ ಮೌಲ್ಯದ ಹಣದ ಲೆಕ್ಕವನ್ನು ನೀಡಬೇಕು’ ಎಂದು ಸಚ್‌ದೇವ ಆಗ್ರಹಿಸಿದರು.

ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅರವಿಂದ ಕೇಜ್ರಿವಾಲ್ ಅವರು ಮುಖ್ಯಮಂತ್ರಿ ನಿವಾಸ ತೊರೆದು ಫಿರೋಜ್‌ಶಾ ರಸ್ತೆಯ ಮಂಡಿ ಹೌಸ್ ಬಳಿಯ ಬಂಗಲೆಗೆ ಸ್ಥಳಾಂತರಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.