ಜಂಜಗೀರ್– ಚಂಪಾ (ಛತ್ತೀಸ್‌ಗಢ): ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಮುಸ್ಲಿಮರನ್ನು ಮಾತ್ರ ಗುರಿಯಾಗಿಸುತ್ತಿದ್ದಾರೆ ಎಂದು ಮಂಗಳವಾರ ಟೀಕಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಡವರು ತಮ್ಮ ಆರ್ಥಿಕ ಪರಿಸ್ಥಿತಿಯಿಂದಾಗಿ ಹೆಚ್ಚು ಮಕ್ಕಳನ್ನು ಹೊಂದಿರುತ್ತಾರೆ ಎಂದು ಹೇಳಿದ್ದಾರೆ.
ಛತ್ತೀಸ್‌ಗಢದ ಜಂಜಗೀರ್– ಚಂಪಾ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಅವರು, ‘ಇಂಡಿಯಾ’ ಮೈತ್ರಿಕೂಟವು ಅಧಿಕಾರಕ್ಕೇರುವ ಸೂಚನೆ ಲಭಿಸಿದ್ದರಿಂದ ಪ್ರಧಾನಿ ಹತಾಶರಾಗಿದ್ದಾರೆ. ಆದ್ದರಿಂದ ‘ಮಂಗಳಸೂತ್ರ ಮತ್ತು ಮುಸ್ಲಿಮರ’ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ದೂರಿದರು.
‘ಕಾಂಗ್ರೆಸ್ ಪಕ್ಷವು ನಿಮ್ಮ ಸಂಪತ್ತನ್ನು ಕಸಿದು ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಹಂಚುತ್ತದೆ ಎಂದು ಮೋದಿ ಹೇಳುತ್ತಾರೆ. ಬಡವರು ಯಾವಾಗಲೂ ಹೆಚ್ಚು ಮಕ್ಕಳನ್ನು ಹೊಂದಿರುತ್ತಾರೆ. ಮುಸ್ಲಿಮರಷ್ಟೇ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆಯೇ’ ಎಂದು ಪ್ರಶ್ನಿಸಿದರು.
‘ಬಡವರ ಬಳಿ ಸಂಪತ್ತು ಇಲ್ಲ. ಆದ್ದರಿಂದ ಅವರು ಹೆಚ್ಚು ಮಕ್ಕಳನ್ನು ಹೊಂದುವರು. ಆದರೆ ನೀವು (ಮೋದಿ) ಮುಸ್ಲಿಮರ ಬಗ್ಗೆ ಮಾತ್ರ ಮಾತನಾಡುವುದು ಏಕೆ? ಮುಸ್ಲಿಮರು ಈ ದೇಶಕ್ಕೆ ಸೇರಿದವರು. ನಾವು ಎಲ್ಲರನ್ನೂ ಜತೆಗೆ ಸೇರಿಸಿಕೊಂಡು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವೆವು. ಅವರಂತೆ (ಬಿಜೆಪಿ) ದೇಶವನ್ನು ಒಡೆಯುವ ಮೂಲಕ ಅಲ್ಲ’ ಎಂದು ತಿಳಿಸಿದರು.
‘ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳ ಆರ್ಥಿಕ ಸ್ಥಿತಿಯನ್ನು ತಿಳಿಯಲು ಜಾತಿಗಣತಿ ಮತ್ತು ಆರ್ಥಿಕ ಸಮೀಕ್ಷೆ ನಡೆಸುವುದಾಗಿ ನಾವು ಹೇಳುತ್ತಿದ್ದರೆ, ಮೋದಿ ಅವರು ಅದನ್ನು ಲೇವಡಿ ಮಾಡುತ್ತಿದ್ದಾರೆ. ಇಂತಹ ಪ್ರಧಾನಿ ಇನ್ನೂ ಐದು ವರ್ಷ ಅಧಿಕಾರದಲ್ಲಿದ್ದರೆ ದೇಶವೇ ನಾಶವಾಗಲಿದೆ’ ಎಂದು ಎಚ್ಚರಿಸಿದರು.
ಬಿಜೆಪಿಯು 400 ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲಲು ಪ್ರಯತ್ನಿಸುತ್ತಿರುವುದು ಬಡವರ ಕಲ್ಯಾಣಕ್ಕಾಗಿ ಅಲ್ಲ ಅವರ ಹಕ್ಕುಗಳನ್ನು ಕಸಿದುಕೊಳ್ಳಲಿಕ್ಕಾಗಿಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ
‘ಸಂವಿಧಾನದ ಪ್ರತಿ ಜತೆಗಿರಲಿ’: ನಾಮಪತ್ರ ಸಲ್ಲಿಸುವ ಸಂದರ್ಭ ಸಾರ್ವಜನಿಕರ ಸಭೆ ಮತ್ತು ಮತದಾರರ ಬಳಿ ತೆರಳುವಾಗ ಸಂವಿಧಾನದ ಪ್ರತಿಯನ್ನು ಜತೆಗೆ ಇಟ್ಟುಕೊಳ್ಳುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪಕ್ಷದ ಅಭ್ಯರ್ಥಿಗಳಿಗೆ ಸೂಚಿಸಿದ್ದಾರೆ. ಕಾಂಗ್ರೆಸ್ ಇರುವವರೆಗೂ ಬಿಜೆಪಿಗೆ ಮಾತ್ರವಲ್ಲ ಜಗತ್ತಿನ ಯಾವ ಶಕ್ತಿಗೂ ಸಂವಿಧಾನವನ್ನು ಕಿತ್ತುಹಾಲು ಸಾಧ್ಯವಿಲ್ಲ ಎಂಬುದನ್ನು ಜನರಿಗೆ ತಿಳಿಸುವಂತೆಯೂ ಅವರು ಕೇಳಿಕೊಂಡಿದ್ದಾರೆ. ಗುಜರಾತ್‌ನ ಪಠಾಣ್ ಛತ್ತೀಸ್‌ಗಢದ ಬಿಲಾಸ್‌ಪುರ ಮತ್ತು ಮಧ್ಯಪ್ರದೇಶದ ಭಿಂಡ್‌ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಸಮಯದಲ್ಲಿ ರಾಹುಲ್ ಅವರು ಸಂವಿಧಾನದ ಪ್ರತಿಯನ್ನು ತಮ್ಮ ಜತೆಗೆ ಇಟ್ಟುಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.