ನವದೆಹಲಿ: ದೆಹಲಿ ಮಹಾನಗರ ಪಾಲಿಕೆಯಲ್ಲಿ (ಎಂಸಿಡಿ) ನಿರ್ಧಾರ ಕೈಗೊಳ್ಳುವ ಸ್ಥಾಯಿ ಸಮಿತಿಗೆ ಚುನಾವಣೆ ನಡೆಸುವಂತೆ ತಡರಾತ್ರಿ ಒತ್ತಾಯಿಸುವ ಮೂಲಕ ಬಿಜೆಪಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲು ಪ್ರಯತ್ನಿಸುತ್ತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿಯವರ ಆದೇಶದ ಮೇರೆಗೆ ದೆಹಲಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದೆ’ ಎಂದು ಸಿಸೋಡಿಯಾ ಕಿಡಿಕಾರಿದ್ದಾರೆ.
ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ವಿದೇಶದಲ್ಲಿದ್ದರೂ ಸ್ಥಾಯಿ ಸಮಿತಿ ಚುನಾವಣೆಯನ್ನು ಯಾವುದೇ ಬೆಲೆ ತೆತ್ತಾದರೂ ಸರಿ ತಕ್ಷಣವೇ ನಡೆಸುವಂತೆ ಆದೇಶಿಸಿರುವುದೇ ಇದಕ್ಕೇ ಸಾಕ್ಷಿ ಎಂದು ಅವರು ಟೀಕಿಸಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಅವರು ಆಯುಕ್ತರಿಗೆ ಪತ್ರ ಬರೆಯುತ್ತಾರೆ ಮತ್ತು ಚುನಾವಣೆ ನಡೆಸಲು ಆದೇಶಿಸುತ್ತಾರೆ ಎಂಬುದು ಬಿಜೆಪಿ ಕೌನ್ಸಿಲರ್‌ಗಳಿಗೆ ಮೊದಲೇ ತಿಳಿದಿತ್ತು ಎಂದು ಅವರು ವ್ಯಂಗ್ಯವಾಡಿದ್ದಾರೆ.
ದೆಹಲಿ ಮಹಾನಗರ ಪಾಲಿಕೆಯಲ್ಲಿ ಸ್ಥಾಯಿ ಸಮಿತಿಗೆ ಗುರುವಾರ ಚುನಾವಣೆ ನಡೆಯಬೇಕಿತ್ತು. ಮೇಯರ್ ಶೆಲ್ಲಿ ಒಬೆರಾಯ್ ಅವರು ನಡೆಸಲು ಮುಂದಾಗಿದ್ದರು. ಆದರೆ, ಸದನದಲ್ಲಿ ಗದ್ದಲ ಉಂಟಾದ ಪರಿಣಾಮ ಮೇಯರ್ ಸದನವನ್ನು ಅಕ್ಟೋಬರ್ 5ಕ್ಕೆ ಮುಂದೂಡಿಕೆ ಮಾಡಿದ್ದರು.
ಸ್ಥಾಯಿ ಸಮಿತಿ ಸದಸ್ಯ ಸ್ಥಾನಕ್ಕೆ ಶುಕ್ರವಾರ ಮಧ್ಯಾಹ್ನ 1ಕ್ಕೆ ಚುನಾವಣೆ ನಡೆಸುವಂತೆ ಲೆಫ್ಟಿನೆಂಟ್ ಗವರ್ನರ್ ಆದೇಶಿಸಿರುವುದಾಗಿ ಪಾಲಿಕೆ ಆಯುಕ್ತ ಅಶ್ವನಿ ಕುಮಾರ್ ತಡರಾತ್ರಿ ಆದೇಶಿಸಿದ್ದಾರೆ. ಜತೆಗೆ ಚುನಾವಣೆಯ ವರದಿಯನ್ನು ರಾತ್ರಿ 10 ಗಂಟೆಯೊಳಗೆ ಸಲ್ಲಿಸುವಂತೆಯೂ ಸೂಚಿಸಿದ್ದಾರೆ.
ಮೇಯರ್ ಅವರು ಚುನಾವಣೆ ನಡೆಸಲು ನಿರಾಕರಿಸಿದರೆ ಉಪಮೇಯರ್ ಅವರನ್ನು ಚುನಾವಣೆಗೆ ಅಧ್ಯಕ್ಷರನ್ನಾಗಿ ನೇಮಿಸುವಂತೆ ಹಾಗೂ ಅವರೂ ನಿರಾಕರಿಸಿದರೆ ಹಿರಿಯ ಸದಸ್ಯರಿಗೆ ಅಧ್ಯಕ್ಷತೆ ವಹಿಸುವಂತೆ ನಿರ್ದೇಶಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.