ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ 'ಬತೋಗೆ ತೊ ಕತೋಗೆ' (ವಿಭಜನೆಯಾದರೆ ನಾಶವಾಗುವಿರಿ) ಎಂಬ ಘೋಷಣೆಯಿಂದ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳು ಅಂತರ ಕಾಯ್ದುಕೊಂಡಿವೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.
ಹಿಂದೂಗಳು ಒಂದೂಗೂಡಿಸಿ ಮತ ಸೆಳೆಯುವ ಸಲುವಾಗಿ ಯೋಗಿ ಅವರು ನೀಡಿರುವ ಈ ಹೇಳಿಕೆಯು 'ಅಸಾಂವಿಧಾನಿಕ' ಹಾಗೂ 'ಅತ್ಯಂತ ನಕಾರಾತ್ಮಕ' ಎಂದು ಪ್ರತಿಪಾದಿಸಿದ್ದಾರೆ.
ಬಕ್ಷಿಯಲ್ಲಿ ಮಂಗಳವಾರ ನಡೆದ ಸಮಾವೇಶದಲ್ಲಿ ಮಾತನಾಡಿರುವ ಅಖಿಲೇಶ್, 'ಬಿಜೆಪಿ ಮುಖ್ಯಮಂತ್ರಿಯ ಹೇಳಿಕೆಯು ಬ್ರಿಟೀಷರ ಒಡೆದು ಆಳುವ ನೀತಿಯಂತಿದೆ. ಬ್ರಿಟೀಷರು ಹೊರಟು ಹೋಗಿದ್ದಾರೆ. ಆದರೆ, ಕೆಲವರು ಅವರ ಆಲೋಚನೆಗಳೊಂದಿಗೆ ಮುನ್ನಡೆಯುತ್ತಿದ್ದಾರೆ' ಎಂದು ಟೀಕಿಸಿದ್ದಾರೆ.
'ಬತೋಗೆ ತೊ ಕತೋಗೆ ಎಂಬುದು ದೇಶದ ಇತಿಹಾಸದಲ್ಲೇ ಅತ್ಯಂತ ನಕಾರಾತ್ಮಕ ಹಾಗೂ ಅಸಾಂವಿಧಾನಿಕ ಘೋಷಣೆಯಾಗಿದೆ. ಬಿಜೆಪಿ ನಾಯಕರು ಹಾಗೂ ಅದರ ಮಿತ್ರಪಕ್ಷಗಳೇ ಈ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿವೆ' ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಅವರಿಗೆ ಕಟುವಾಗಿ ಟೀಕಿಸಿದ ಯಾದವ್, ತಮ್ಮ ಆಲೋಚನೆಗಳು ಮತ್ತು ವಚನಗಳಿಂದಾಗಿ ಯೋಗಿಗಳಾಗುತ್ತಾರೆಯೇ ಹೊರತು, ವಸ್ತ್ರಗಳಿಂದ ಅಲ್ಲ ಎಂದಿದ್ದಾರೆ.
ಉಪಚುನಾವಣೆಯಲ್ಲಿ ಹೀನಾಯವಾಗಿ ಸೋಲುತ್ತೇವೆ ಎಂಬುದು ಬಿಜೆಪಿಯವರಿಗೆ ಗೊತ್ತಾಗಿದೆ. ಹಾಗಾಗಿಯೇ, ಜನರು ಮತದಾನ ಮಾಡಲು ಹೋಗದಂತೆ ತಡೆಯಲು ಆಡಳಿತವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
'ಸರ್ಕಾರವು ಜಿಲ್ಲಾಧಿಕಾರಿಗಳನ್ನು ಬಿಜೆಪಿಯ ಜಿಲ್ಲಾ ಘಟಕಗಳ ಅಧ್ಯಕ್ಷರಂತೆ ಮಾಡುತ್ತಿದೆ. ಆ ಮೂಲಕ ಜನರು ತಮ್ಮ ಹಕ್ಕು ಚಲಾಯಿಸದಂತೆ ತಡೆಯಲು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದು, ಜನರ ಮತದಾನದ ಹಕ್ಕಿನ ಮೇಲಿನ ದಾಳಿಯಾಗಿದೆ. ಸಾಂವಿಧಾನಿಕ ಸಂಸ್ಥೆಗಳಿಗೆ ತನ್ನದೇ ಕಲ್ಪನೆಯ ಬಣ್ಣ ಬಳಿಯಲು ಬಿಜೆಪಿ ಯತ್ನಿಸುತ್ತಿದೆ. ನಾವೆಲ್ಲರೂ ಒಂದಾಗಿ ಸಂವಿಧಾನವನ್ನು ಉಳಿಸುವ ಪ್ರತಿಜ್ಞೆ ಮಾಡಬೇಕಿದೆ' ಎಂದು ಕರೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.