ADVERTISEMENT

ಜಾರ್ಖಂಡ್‌ನಲ್ಲಿ ಯುಸಿಸಿ ಅನುಷ್ಠಾನ ನಿಶ್ಚಿತ ಬುಡಕಟ್ಟು ಜನರಿಗೆ ಅನ್ವಯ ಆಗದು: ಶಾ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2024, 15:23 IST
Last Updated 3 ನವೆಂಬರ್ 2024, 15:23 IST
ಅಮಿತ್ ಶಾ
ಅಮಿತ್ ಶಾ   

ನವದೆಹಲಿ: ‘ಜಾರ್ಖಂಡ್‌ನಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅನುಷ್ಠಾನ ನಿಶ್ಚಿತ. ಆದರೆ, ಯುಸಿಸಿ ವ್ಯಾಪ್ತಿಯಿಂದ ಸ್ಥಳೀಯ ಬುಡಕಟ್ಟು ಜನರನ್ನು ಹೊರಗಿಡಲಿದ್ದು, ಈ ಸಮುದಾಯದ ಅಸ್ಮಿತೆ ಮತ್ತು ಪರಂಪರೆಯನ್ನು ರಕ್ಷಿಸಲಾಗುವುದು’ ಎಂದು ಬಿಜೆಪಿ ಪ್ರಕಟಿಸಿದೆ.

ವಿಧಾನಸಭೆ ಚುನಾವಣೆಗೆ ಭಾನುವಾರ ರಾಂಚಿಯಲ್ಲಿ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಈ ಅಂಶ ಸ್ಪಷ್ಟಪಡಿಸಿದೆ. ಪ್ರಣಾಳಿಕೆ ಬಿಡುಗಡೆ ಮಾಡಿದ ಗೃಹಸಚಿವ ಅಮಿತ್ ಶಾ, ‘ರಾಜ್ಯದಲ್ಲಿ ಸ್ಥಳೀಯ ಬುಡಕಟ್ಟು ಸಮುದಾಯದವರ ಜನಸಂಖ್ಯೆ ಗಣನೀಯವಾಗಿ ಕ್ಷೀಣಿಸುತ್ತಿದೆ’ ಎಂದರು. 

ರಾಜ್ಯದ ಸಂತಾಲ್‌ ಪರಗಣ ವಲಯದಲ್ಲಿ ನುಸುಳುಕೋರರು ಹೆಚ್ಚುತ್ತಿದ್ದಾರೆ. ಅವರು ನಮ್ಮ ಹೆಣ್ಣುಮಕ್ಕಳನ್ನು ಸೆಳೆದು ಮದುವೆಯಾಗುತ್ತಿದ್ದಾರೆ. ಸ್ಥಳೀಯರ ನೆಲವನ್ನು ಅತಿಕ್ರಮಿಸಿಕೊಳ್ಳುತ್ತಿದ್ದಾರೆ. ಈ ಪ್ರವೃತ್ತಿಯನ್ನು ತಡೆಯದೇ ಇದ್ದರೆ ರಾಜ್ಯದ ಸಂಸ್ಕೃತಿಯು ಉಳಿಯುವುದಿಲ್ಲ. ಭೂಮಿಯೂ ಸಿಗುವುದಿಲ್ಲ. ಅಲ್ಲದೆ, ನಮ್ಮ ಹೆಣ್ಣು ಮಕ್ಕಳೂ ಸುರಕ್ಷಿತವಾಗಿರುವುದಿಲ್ಲ’ ಎಂದು ಶಾ ಎಚ್ಚರಿಸಿದರು.

ADVERTISEMENT

ಇದೇ ಕಾರಣದಿಂದ ಬಿಜೆಪಿಯು ‘ರೋಟಿ, ಬೇಟಿ, ಮಾಟಿ..’ ಸುರಕ್ಷಣೆಯ ಘೋಷಣೆಯೊಂದಿಗೆ ಬಿಜೆಪಿಯು ಮುನ್ನಡೆಯುತ್ತಿದೆ ಎಂದು ಹೇಳಿದರು. ರಾಜ್ಯದ ‘ಹೇಮಂತ್ ಸೊರೇನ್‌ ಸರ್ಕಾರ ತುಷ್ಟಿಕರಣ ರಾಜಕಾರಣದಲ್ಲಿ ತೊಡಗಿದೆ’ ಎಂದು ಅವರು ವಾಗ್ದಾಳಿ ನಡೆಸಿದರು.

ಬಿಜೆಪಿಯು ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ, ರಾಜ್ಯದ ಬುಡಕಟ್ಟು ಮಹಿಳೆಯರನ್ನು ಹೊರಗಿನವರು ಮದುವೆಯಾದಲ್ಲಿ ಈ ದಂಪತಿಯ ಮಕ್ಕಳಿಗೆ ಬುಡಕಟ್ಟು ಜನರ ಮಾನ್ಯತೆಯನ್ನು ನೀಡುವುದಿಲ್ಲ ಎಂದು ಅವರು ಭರವಸೆ ನೀಡಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವ ಭರವಸೆ ಮೂಡಿದೆ. ಬಿಜೆಪಿ ನಾವು ಈ ನುಸುಳುಕೋರರನ್ನು ವಾಪಸು ಕಳುಹಿಸಲಿದೆ. ಸ್ಥಳೀಯ ಮಹಿಳೆಯರಿಂದ ಕಸಿದುಕೊಂಡಿರುವ ಭೂಮಿಯನ್ನು ಮರಳಿಕೊಡಿಸಲು ಕಾಯ್ದೆಯನ್ನು ರೂಪಿಸಲಿದೆ ಎಂದು ಹೇಳಿದರು.

ಬಿಜೆಪಿ ಇದರ ಹೊರತಾಗಿ ತನ್ನ ಪ್ರಣಾಳಿಕೆಯಲ್ಲಿ ‘ಗೊಗೊ ದೀದಿ ಯೋಜನೆ’ಯಡಿ ಮಹಿಳೆಯರಿಗೆ ಮಾಸಿಕ ₹ 2,100 ಆರ್ಥಿಕ ನೆರವು ನೀಡುವುದು, ₹ 500ಕ್ಕೆ ಅಡುಗೆ ಅನಿಲ ಸಿಲಿಂಡರ್ ಹಾಗೂ ಪ್ರತಿ ದೀಪಾವಳಿ ಮತ್ತು ರಕ್ಷಾಬಂಧನಕ್ಕೆ ಉಚಿತ ಸಿಲಿಂಡರ್ ನೀಡುವ ಭರವಸೆಯನ್ನೂ ನೀಡಿದೆ 

ಯುವಜನರಿಗೆ ತಮ್ಮ ವೃತ್ತಿ ಜೀವನದಲ್ಲಿ ನೆರವಾಗಲು ಎರಡು ವರ್ಷ ಅವಧಿಗೆ ಮಾಸಿಕ ₹2000 ಸ್ಟೈಪೆಂಡ್‌ ನೀಡಲಿದೆ. ಜೊತೆಗೆ 2.87 ಲಕ್ಷ ಸರ್ಕಾರಿ ಉದ್ಯೋಗ ಹಾಗೂ ಖಾಸಗಿ ವಲಯದಲ್ಲಿ 5 ಲಕ್ಷ ಉದ್ಯೋಗ ಸೃಷ್ಟಿಸುವುದಾಗಿಯೂ ಬಿಜೆಪಿ ಭರವಸೆ ನೀಡಿದೆ.  

ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮತ್ತು ಕೇಂದ್ರ ಸಚಿವ ಶಿವರಾಜ್‌ ಚೌಹಾಣ್‌ ಅವರೂ ಭಾಗವಹಿಸಿದ್ದರು.

ಜಾತಿ ಜನಗಣತಿ ಮತ್ತು ರಾಜ್ಯದ ಅಭಿವೃದ್ಧಿಯಲ್ಲಿ ಕೇಂದ್ರದ ಜವಾಬ್ದಾರಿ ಕುರಿತು ಬಿಜೆಪಿ ಮೌನವಾಗಿದೆ. ಧರ್ಮದ ಹೆಸರಲ್ಲಿ ಧ್ರುವೀಕರಣ ಮತ್ತು ಕೋಮು ಸೋಂಕು ಹಬ್ಬಿಸುವುದಷ್ಟೇ ಬಿಜೆಪಿಯ ಕೆಲಸ
ಜೈರಾಮ್‌ ರಮೇಶ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

ಯುಸಿಸಿಗೆ ಅವಕಾಶ ನೀಡುವುದಿಲ್ಲ –ಸೊರೇನ್

ರಾಂಚಿ : ‘ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್‌ಸಿ) ಜಾರಿಗೆ ಅವಕಾಶ ನೀಡುವುದಿಲ್ಲ’ ಎಂದು ಮುಖ್ಯಮಂತ್ರಿ ಹೇಮಂತ್ ಸೊರೇನ್ ಹೇಳಿದ್ದಾರೆ. ‘ಸ್ಥಳೀಯ ಬುಡಕಟ್ಟು ಜನರ ಸಂಸ್ಕೃತಿ ಭೂಮಿ ಮತ್ತು ಹಕ್ಕುಗಳ ರಕ್ಷಣೆಗಾಗಿ ರೂಪಿಸಿರುವ ಸಿಎನ್‌ಟಿ ಕಾಯ್ದೆ ಮತ್ತು ಸಂತಾಲ್‌ ಪರಗಣ ಹಿಡುವಳಿ (ಎಸ್‌ಪಿಟಿ) ಕಾಯ್ದೆಗಳಿಗೆ ಮಾತ್ರವೇ ಜಾರ್ಖಂಡ್‌ ಬದ್ಧವಾಗಿರಲಿದೆ’ ಎಂದರು. ಅಮಿತ್ ಶಾ ಅವರು ಯುಸಿಸಿ ಜಾರಿಗೆ ಬದ್ಧ ಎಂದು ಘೋಷಿಸಿದ ಹಿಂದೆಯೇ ತಿರುಗೇಟು ನೀಡಿರುವ ಸೊರೇನ್ ‘ಬಿಜೆಪಿಯುವರು ವಿಷ ಕಾರುವವರು. ಅವರು ಸ್ಥಳೀಯರ ಹಿತ ರಕ್ಷಿಸುವುದಿಲ್ಲ’ ಎಂದು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.