ADVERTISEMENT

ಮತ ಗಳಿಸುವುದು ಹೇಗೆಂದು ಬಿಜೆಪಿಗೆ ಗೊತ್ತು: ರಾಕೇಶ್ ಟಿಕಾಯತ್

ಐಎಎನ್ಎಸ್
Published 11 ಮಾರ್ಚ್ 2022, 9:03 IST
Last Updated 11 ಮಾರ್ಚ್ 2022, 9:03 IST
ರಾಕೇಶ್ ಟಿಕಾಯತ್
ರಾಕೇಶ್ ಟಿಕಾಯತ್   

ಮುಜಾಫರ್‌ನಗರ: ಬಿಜೆಪಿಯು ಕೇವಲ ಅಧಿಕ ಮತಗಳಿಸಲು ಮಾತ್ರ ಕೆಲಸ ಮಾಡಿದೆ ಮತ್ತು ಅದನ್ನು ಮಾಡುವಲ್ಲಿ ಯಶಸ್ವಿಯೂ ಆಗಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ವಕ್ತಾರ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.

13 ತಿಂಗಳ ಕಾಲ ಯಶಸ್ವಿಯಾಗಿ ನಾವು ರೈತರ ಪ್ರತಿಭಟನೆಯನ್ನು ನಡೆಸಿದ್ದೇವೆ. ನಾವು ಆಂದೋಲನಕಾರಿ ಮತ್ತು ಬಿಜೆಪಿ ವೋಟ್‌ಕಾರಿ. ಈ ವೇಳೆ ಎಲ್ಲಾ ರಾಜಕೀಯ ಪಕ್ಷಗಳು ರೈತರನ್ನು ಗಂಭೀರವಾಗಿ ಪರಿಗಣಿಸಿವೆ ಮತ್ತು ತಮ್ಮ ಪ್ರಣಾಳಿಕೆಯಲ್ಲಿ ರೈತರ ಕಲ್ಯಾಣ ಕಾರ್ಯಕ್ರಮಗಳನ್ನು ಸೇರಿಸಿವೆ. ಯಾರು ಗೆದ್ದಿದ್ದಾರೆ ಎಂಬುದು ಮುಖ್ಯವಲ್ಲ, ರೈತರ ಬೇಡಿಕೆ ಮತ್ತು ಅಗತ್ಯಗಳನ್ನು ಪೂರೈಸಬೇಕು. ರೈತರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಬೇಕು' ಎಂದು ಸುದ್ದಿಗಾರರಿಗೆ ತಿಳಿಸಿದರು.

ಬಿಜೆಪಿ ವಿರುದ್ಧ ಪ್ರಚಾರ ನಡೆಸಿದ್ದ ಟಿಕಾಯತ್, ಬಿಜೆಪಿಗೆ ಮತ ಚಲಾಯಿಸದಿರಿ ಎಂದು ಜನರಿಗೆ ಮನವಿ ಮಾಡಿದ್ದರು.

ADVERTISEMENT

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಮೇಲೆ ರೈತರ ಪ್ರತಿಭಟನೆಯಿಂದಾದ ಪರಿಣಾಮಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರೈತರ ಪ್ರತಿಭಟನೆಯು ಬಿಜೆಪಿಗೆ ಹಾನಿಯುಂಟುಮಾಡಿದೆ. ಹೀಗಾಗಿಯೇ ಅವರು ಕಳೆದ ಚುನಾವಣೆಯಲ್ಲಿ ಗೆದ್ದಿದ್ದಕ್ಕಿಂತ ಕಡಿಮೆ ಸ್ಥಾನಗಳಲ್ಲಿ ವಿಜಯ ಸಾಧಿಸಿದ್ದಾರೆ. ಎಸ್‌ಪಿ-ಆರ್‌ಎಲ್‌ಡಿ ನೇತೃತ್ವದ ಮೈತ್ರಿಯು ಮುಜಾಫರ್‌ನಗರದ ಆರು ಕ್ಷೇತ್ರಗಳ ಪೈಕಿ ನಾಲ್ಕು ಸ್ಥಾನಗಳನ್ನು ಬಿಜೆಪಿಯಿಂದ ಕಿತ್ತುಕೊಂಡಿದೆ' ಎಂದರು.

ಮುಜಾಫರ್‌ನರದ ಬುಧಾನಾ ವಿಧಾನಸಭಾ ಕ್ಷೇತ್ರದಲ್ಲಿ ಟಿಕಾಯತ್ ಅವರ ಗ್ರಾಮವಿದೆ. ಈ ಕ್ಷೇತ್ರದಲ್ಲಿ ಆರ್‌ಎಲ್‌ಡಿಯ ರಾಜ್‌ಪಾಲ್ ಬಲಿಯಾನ್, ಬಿಜೆಪಿ ಶಾಸಕ ಉಮೇಶ್ ಮಲಿಕ್ ಅವರನ್ನ ಸೋಲಿಸಿದ್ದಾರೆ.

ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಬಿಜೆಪಿ ಜಯ ಸಾಧಿಸಿದೆ ಮತ್ತು ಹೇಗೆ ಮತಗಳನ್ನು ಗಳಿಸಬೇಕು ಎಂಬುದು ಅದಕ್ಕೆ ಗೊತ್ತು. ಒಂದು ಕಡೆ ಜನರನ್ನು ಬಡವರನ್ನಾಗಿಸುತ್ತದೆ, ಮತ್ತೊಂದೆಡೆ ಸಮುದಾಯವನ್ನು ಒಡೆಯಲು ಕೋಮುವಾದದ ನೀತಿಯನ್ನು ಅನುಸರಿಸುತ್ತದೆ. ಈ ದುರಂತ ಇಡೀ ದೇಶದಾದ್ಯಂತ ನಡೆಯುತ್ತಿದೆ' ಎಂದು ಹೇಳಿದ್ದಾರೆ.

ರೈತರ ಹೋರಾಟವು ಮುಂದುವರಿಯುತ್ತದೆ. ರೈತ ಸಂಬಂಧಿತ ಸಮಸ್ಯೆಗಳನ್ನು ಬಿಜೆಪಿ ಪರಿಗಣಿಸುತ್ತಿದೆಯೇ ಎಂಬುದಕ್ಕಾಗಿ ನಾವು ಸಮಿತಿಯನ್ನ ರಚಿಸುತ್ತೇವೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.