ADVERTISEMENT

ದೇಶದ ಮನಸ್ಥಿತಿ ಬದಲಾಗಿದೆ: ಕಾಂಗ್ರೆಸ್ ವಿರುದ್ಧ ‌ಅಭಿಯಾನ ಆರಂಭಿಸಿದ ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಆಗಸ್ಟ್ 2022, 7:35 IST
Last Updated 17 ಆಗಸ್ಟ್ 2022, 7:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕಾಂಗ್ರೆಸ್ ಅನ್ನು ಗುರಿಯಾಗಿಸಿರುವ ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ‘ದೇಶ್ ಕಿ ಬದ್ಲಿ ಸೋಚ್’ (ದೇಶದ ಮನಸ್ಥಿತಿ ಬದಲಾಗಿದೆ) ಅಭಿಯಾನವನ್ನು ಪ್ರಾರಂಭಿಸಿದೆ.

ಬಿಜೆಪಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಅಭಿಯಾನ ಆರಂಭಿಸಿದ್ದು, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್, ರಾಜೀವ್ ಗಾಂಧಿ, ಇಂದಿರಾ ಗಾಂಧಿ ಮತ್ತು ಜವಾಹರಲಾಲ್ ನೆಹರು ಮಾಡಿದ ಭಾಷಣದ ಮುಖ್ಯಾಂಶಗಳನ್ನು ಉಲ್ಲೇಖಿಸಿದೆ.

‘1962ರ ಚೀನಾ –ಭಾರತ ಯುದ್ಧದ ನಂತರ 1963ರ ರಾಷ್ಟ್ರ ಉದ್ದೇಶಿಸಿ ಭಾಷಣ ಮಾಡಿದ್ದ ನೆಹರೂ ಅವರು ಹುತಾತ್ಮರಾದ ಯೋಧರಿಗೆ ಯಾವುದೇ ಗೌರವ ಸಲ್ಲಿಸಿರಲಿಲ್ಲ’ ಎಂದು ಬಿಜೆಪಿ ಆರೋಪಿಸಿದೆ.

ADVERTISEMENT

2020ರಲ್ಲಿ ರಾಷ್ಟ್ರ ಉದ್ದೇಶಿಸಿ ಮೋದಿ ಮಾಡಿದ ಭಾಷಣದಲ್ಲಿ ಲಡಾಖ್‌ನಲ್ಲಿ ಚೀನಾದ ಪಡೆಗಳೊಂದಿಗಿನ ಸಂಘರ್ಷದಲ್ಲಿ ಹುತಾತ್ಮರಾದ ಯೋಧರ ತ್ಯಾಗವನ್ನು ಸ್ಮರಿಸಿದ್ದಾರೆ ಎಂದು ಬಿಜೆಪಿ ಉಲ್ಲೇಖಿಸಿದೆ.

2008 –2009ರಲ್ಲಿ ಮನಮೋಹನ್ ಸಿಂಗ್ ಅವರ ಭಾಷಣಗಳನ್ನು ಉಲ್ಲೇಖಿಸಿರುವ ಬಿಜೆಪಿ, ‘ಕೇವಲ ಗಾಂಧಿ ಕುಟುಂಬವನ್ನು ಸಮಾಧಾನಪಡಿಸಿದ್ದರು’ ಎಂದು ಆರೋಪಿಸಿದೆ. ಇದೇ ವೇಳೆ 2014ರ ಮೋದಿ ಭಾಷಣ ಉಲ್ಲೇಖಿಸಿರುವ ಬಿಜೆಪಿ, ‘ಎಲ್ಲಾ ಪ್ರಧಾನ ಮಂತ್ರಿಗಳ ಕೊಡುಗೆ ಸ್ಮರಿಸಿದ್ದರು’ ಎಂದಿದೆ.

1975ರಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದ ಇಂದಿರಾ ಗಾಂಧಿಯವರ ಆಡಳಿತವನ್ನು 2017ರ ಮೋದಿ ಭಾಷಣದೊಂದಿಗೆ ಹೋಲಿಸಿರುವ ಬಿಜೆಪಿ, ‘ಪ್ರಜಾಪ್ರಭುತ್ವವನ್ನು ಭಾರತದ ‘ದೊಡ್ಡ ಶಕ್ತಿ’ ಎಂದು ಮೋದಿ ಹೇಳಿದ್ದರು ಎಂದು ಉಲ್ಲೇಖಿಸಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ‘ಕೇಂದ್ರ ಸರ್ಕಾರವು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಕಡೆಗಣಿಸುತ್ತಿದೆ’ ಎಂದು ಆರೋಪಿಸಿದ್ದರು.

ಕೇಂದ್ರ ಸರ್ಕಾರದ ಧೋರಣೆಯ ವಿರುದ್ಧ ವಾಗ್ದಾಳಿ ನಡೆಸಿದ್ದ ಸೋನಿಯಾ, ‘ಸ್ನೇಹಿತರೇ, ಕಳೆದ 75 ವರ್ಷಗಳಲ್ಲಿ ನಾವು ಮಹತ್ತರ ಸಾಧನೆ ಮಾಡಿದ್ದೇವೆ. ಆದರೆ ಈಗಿನ ಸ್ವಾರ್ಥ ಪರ ಸರ್ಕಾರವು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ, ಸಾಧನೆಯನ್ನು ಕಡೆಗಣಿಸುತ್ತಿದೆ. ಇದನ್ನು ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ಹೇಳಿದ್ದರು.

ರಾಜಕೀಯ ಲಾಭಕ್ಕಾಗಿ ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸವನ್ನು ತಿರುಚಲು ಮುಂದಾಗಿರುವುದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದಿದ್ದರು.

1947ರಲ್ಲಿ ಭಾರತದ ವಿಭಜನೆಗೆ ಕಾರಣವಾದ ಘಟನೆಗಳನ್ನು ವಿವರಿಸುವ ವಿಡಿಯೊಗಳನ್ನು ಬಿಜೆಪಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಿತ್ತು. ಆ ಹಿನ್ನೆಲೆಯಲ್ಲಿ ಕೇಂದ್ರದ ವಿರುದ್ಧ ಸೋನಿಯಾ ವಾಗ್ದಾಳಿ ನಡೆಸಿದ್ದರು.

ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.