ADVERTISEMENT

ಐಪಿಎಲ್‌ನಲ್ಲಿ ಮೋಸ ನಡೆದಿದೆ, ಪಿಐಎಲ್‌ ಬೇಕಾಗಬಹುದು: ಸುಬ್ರಮಣಿಯನ್‌ ಸ್ವಾಮಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಜೂನ್ 2022, 12:53 IST
Last Updated 2 ಜೂನ್ 2022, 12:53 IST
ಸುಬ್ರಮಣಿಯನ್‌ ಸ್ವಾಮಿ
ಸುಬ್ರಮಣಿಯನ್‌ ಸ್ವಾಮಿ    

ನವದೆಹಲಿ: ಟಿ20 ಕ್ರಿಕೆಟ್‌ ಟೂರ್ನಿ ಐಪಿಎಲ್‌ನಲ್ಲಿ ಮೋಸ ನಡೆದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಬಿಜೆಪಿ ನಾಯಕಸುಬ್ರಮಣಿಯನ್‌ ಸ್ವಾಮಿ ಅವರು, ತನಿಖೆಗಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌)ಯ ಅಗತ್ಯ ಬೀಳಬಹುದು ಎಂದಿದ್ದಾರೆ.

ಈ ಬಗ್ಗೆ ಗುರುವಾರ ಬೆಳಗ್ಗೆ ಟ್ವೀಟ್‌ ಮಾಡಿರುವ ಸ್ವಾಮಿ, ‘ಟಾಟಾ ಐಪಿಎಲ್ ಕ್ರಿಕೆಟ್ ಫಲಿತಾಂಶದಲ್ಲಿ ಮೋಸವಾಗಿದೆ ಎಂದು ಗುಪ್ತಚರ ಸಂಸ್ಥೆಗಳಲ್ಲಿ ವ್ಯಾಪಕವಾದ ಚರ್ಚೆ ನಡೆದಿದೆ. ಈ ಅನುಮಾನದ ನಿವಾರಣೆಗೆ ತನಿಖೆ ನಡೆಯಬೇಕಾಗಬಹುದು. ಆದರೆ, ಅಮಿತ್ ಶಾ ಅವರ ಪುತ್ರನೇ ಬಿಸಿಸಿಐನ ವಾಸ್ತವ ಸರ್ವಾಧಿಕಾರಿಯಾಗಿರುವುದರಿಂದ ಸರ್ಕಾರ ತನಿಖೆ ನಡೆಸುವುದಿಲ್ಲ. ಹಾಗಾಗಿ ಪಿಐಎಲ್‌ ಅಗತ್ಯವಾಗಬಹುದು’ ಎಂದು ಅವರು ಹೇಳಿದ್ದಾರೆ.

ಮೇ 29ರಂದು ಗುಜರಾತ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ ಫೈನಲ್‌ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ ಗೆಲುವು ಸಾಧಿಸಿದ್ದ ಹಾರ್ದಿಕ್‌ ಪಾಂಡ್ಯ ನೇತೃತ್ವದ ‘ಗುಜರಾತ್‌ ಟೈಟನ್ಸ್‌’ ಕಪ್‌ ತನ್ನದಾಗಿಸಿಕೊಂಡಿತ್ತು. ಗುಜರಾತ್ ಟೈಟನ್ಸ್‌ ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಕಣಕ್ಕಿಳಿದಿತ್ತು

ADVERTISEMENT

ಈ ಬಾರಿಯ ಕೂಟದಲ್ಲಿ ಫಿಕ್ಸಿಂಗ್‌ ನಡೆದಿರಬಹುದು ಎಂಬ ಅನುಮಾನಗಳು ಈಗಾಗಲೇ ವ್ಯಾಪಕವಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲೂ ಕಾವೇರಿದ ಚರ್ಚೆ ನಡೆದಿದೆ. ಹೀಗಿರುವಾಗಲೇ ಸುಬ್ರಮಣಿಯನ್‌ ಸ್ವಾಮಿ ಅವರು ಮಾಡಿರುವ ಟ್ವೀಟ್‌, ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸಿದೆ.

ಭವಿಷ್ಯ ನುಡಿದಿದ್ದ ಪ್ರಿಯಾಂಕ್‌ ಖರ್ಗೆ

ಕರ್ನಾಟಕದ ಕಾಂಗ್ರೆಸ್‌ ನಾಯಕ ಪ್ರಿಯಾಂಕ್‌ ಖರ್ಗೆ ಅವರೂ ಇದೇ ಅನುಮಾನ ವ್ಯಕ್ತಪಡಿಸಿದ್ದರು. ಟೂರ್ನಿಯಲ್ಲಿ ಗುಜರಾತ್‌ ಟೈಟನ್ಸ್‌ ತಂಡವೇ ಗೆಲ್ಲವುದಾಗಿಯೂ, ಫಲಿತಾಂಶ ಮೊದಲೇ ನಿರ್ಧಾರವಾಗಿದೆ ಎಂದೂ ಟ್ವೀಟ್‌ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.