ADVERTISEMENT

ಅವಹೇಳನಕಾರಿ ಹೇಳಿಕೆ: ಡಿಎಂಕೆ ನಾಯಕ ಶಿವಾಜಿ ಕೃಷ್ಣಮೂರ್ತಿ ವಿರುದ್ಧ ಖುಷ್ಬೂ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 18 ಜೂನ್ 2023, 13:48 IST
Last Updated 18 ಜೂನ್ 2023, 13:48 IST
ಖುಷ್ಬೂ ಸುಂದರ್
ಖುಷ್ಬೂ ಸುಂದರ್    

ಚೆನ್ನೈ : ಡಿಎಂಕೆ ನಾಯಕ ಶಿವಾಜಿ ಕೃಷ್ಣಮೂರ್ತಿ ಅವರು ತಮ್ಮ ಬಗ್ಗೆ ನೀಡಿರುವ ಹೇಳಿಕೆಯನ್ನು ಬಿಜೆಪಿ ನಾಯಕಿ ಖುಷ್ಬೂ ಸುಂದರ್‌ ಅವರು ಭಾನುವಾರ ವಿರೋಧಿಸಿದ್ದಾರೆ. ಶಿವಾಜಿ ಅವರ ಹೇಳಿಕೆಯು ಕೀಳುಮಟ್ಟದ ಅಭಿರುಚಿಯಿಂದ ಕೂಡಿದೆ ಎಂದು ಅವರು ಟೀಕಾಪ್ರಹಾರ ನಡೆಸಿದ್ದಾರೆ.

ಶಿವಾಜಿ ಕೃಷ್ಣಮೂರ್ತಿ ಅವರು ಸಾರ್ವಜನಿಕ ಸಭೆಯೊಂದರಲ್ಲಿ ಖುಷ್ಬೂ ಕುರಿತಂತೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಕಾರ್ಯಕ್ರಮದ ವಿಡಿಯೊ ತುಣುಕನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿರುವ ಖುಷ್ಬೂ, ‘ಸ್ವಭಾವತಃ ದುಷ್ಟನಾಗಿರುವ ಶಿವಾಜಿಯ ಕೀಳು ಅಭಿರುಚಿಯ ಹೇಳಿಕೆಗಳು ಡಿಎಂಕೆಯ ರಾಜಕೀಯ ಸಂಸ್ಕೃತಿಯನ್ನು ತೋರುತ್ತದೆ. ಆ ಗುಂಡಿಯಲ್ಲಿ ಶಿವಾಜಿಯಂಥವರು ಸಾಕಷ್ಟು ಜನರಿದ್ದಾರೆ. ಮಹಿಳೆಯರನ್ನು ನಿಂದಿಸುತ್ತಾರೆ ಮತ್ತು ಕೀಳು ಅಭಿರುಚಿಯ ಹೇಳಿಕೆಗಳನ್ನು ಅವರು ನೀಡುತ್ತಾರೆ. ಆದರೆ ಅದನ್ನು ಯಾರೂ ಪ್ರಶ್ನಿಸುವುದಿಲ್ಲ. ಬಹುಶಃ ಅಂಥವರಿಗೆ ಡಿಎಂಕೆ ಹೆಚ್ಚಿನ ಅವಕಾಶ ನೀಡಬಹುದು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರಿಗೆ ಟ್ವೀಟ್‌ ಟ್ಯಾಗ್‌ ಮಾಡಿರುವ ಅವರು, ‘ಶಿವಾಜಿ ನನ್ನನ್ನು ಮಾತ್ರ ನಿಂದಿಸಿಲ್ಲ. ನಿಮ್ಮನ್ನು ಮತ್ತು ಜನಪ್ರಿಯ ನಾಯಕ, ನಿಮ್ಮ ತಂದೆ (ಎಂ. ಕರುಣಾನಿಧಿ) ಅವರನ್ನೂ ನಿಂದಿಸಿದ್ದಾರೆ. ಆದರೆ ಈ ಸತ್ಯ ನಿಮಗೆ ಅರಿವಾಗಿಲ್ಲ. ಶಿವಾಜಿಗೆ ಹೆಚ್ಚು ಅವಕಾಶ ನೀಡಿದಷ್ಟೂ ನಿಮ್ಮ ರಾಜಕೀಯ ಅವಕಾಶಗಳು ಕಡಿಮೆ ಆಗುತ್ತವೆ. ನಿಮ್ಮ ಪಕ್ಷವು ಅಸಂಸ್ಕೃತ ಗೂಂಡಾಗಳ ಆಶ್ರಯ ತಾಣವಾಗುತ್ತಿದೆ. ಇದು ತೀರಾ ಅವಮಾನಕಾರಿ’ ಎಂದು ಹೇಳಿದ್ದಾರೆ.

ADVERTISEMENT

ಶಿವಾಜಿ ಅವರ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರೂ ವಿರೋಧ ವ್ಯಕ್ತಪಡಿಸಿದ್ದಾರೆ. ಮೇಲಿಂದ ಮೇಲೆ ತಪ್ಪು ಮಾಡುತ್ತಿರುವ ಶಿವಾಜಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ತಮಿಳುನಾಡು ರಾಜ್ಯಪಾಲ ಆರ್‌.ಎನ್. ರವಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದ ಕಾರಣ ಶಿವಾಜಿ ಅವರನ್ನು ಡಿಎಂಕೆ ಅಮಾನತ್ತಿನಲ್ಲಿಟ್ಟಿತ್ತು. ಅವರು ಕ್ಷಮೆಯಾಚಿಸಿದ ಬಳಿಕ ಅಮಾನತ್ತನ್ನು ಹಿಂಪಡೆಯಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.