ಕೋಲ್ಕತ್ತ: ಬಂಗಾಳ ಬಿಜೆಪಿಯಿಂದ ಆಡಳಿತಾರೂಢ ಟಿಎಂಸಿಗೆ ಹಿಂತಿರುಗುವವರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಈ ನಡುವೆಯೇ, ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್ ಅವರೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಶುಕ್ರವಾರ ಭೇಟಿ ಮಾಡುವ ಸಾಧ್ಯತೆ ಇದೆ. ಈ ಕುರಿತು ಹಲವು ಮಾಧ್ಯಮಗಳು ವರದಿ ಮಾಡಿವೆ.
ಮುಕುಲ್ ರಾಯ್ ಮಮತಾ ಬ್ಯಾನರ್ಜಿ ಅವರ ಆಪ್ತ ಬಳಗದಲ್ಲಿದ್ದ ಗುರುತಿಸಿಕೊಂಡಿದ್ದ ಮುಖಂಡ. 2017ರಲ್ಲಿ ಅವರು ಬಿಜೆಪಿ ಸೇರ್ಪಡೆಗೊಂಡಿದ್ದರು.
‘ತೃಣಮೂಲ ಕಾಂಗ್ರೆಸ್ ಮತ್ತು ಮುಕುಲ್ ರಾಯ್ ಅವರ ನಡುವೆ ‘ಘರ್ ವಾಪ್ಸಿ’ಯ (ಪಕ್ಷಕ್ಕೆ ಹಿಂತಿರುಗುವ) ಮಾತುಕತೆಗಳು ನಡೆಯುತ್ತಿವೆ,’ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಆದಾಗ್ಯೂ, ಮುಕುಲ್ ಅವರ ಮರುಸೇರ್ಪಡೆ ಇನ್ನೂ ಖಚಿತವಾಗಿಲ್ಲ. ಈ ಕುರಿತು ಪ್ರಜಾವಾಣಿ ಸೋದರ ಪತ್ರಿಕೆ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.
ಮುಕುಲ್ ರಾಯ್ ಅವರು ಬಿಜೆಪಿಯ ಪ್ರಮುಖ ಸಭೆಗೆ ಗೈರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಕೋವಿಡ್ ಪೀಡಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮುಕುಲ್ ರಾಯ್ ಅವರ ಪತ್ನಿಯನ್ನು ಭೇಟಿಯಾಗಿದ್ದ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಆರೋಗ್ಯ ವಿಚಾರಿಸಿದ್ದರು.
2017ರಲ್ಲಿ ಟಿಎಂಸಿ ತೊರೆದಿದ್ದ ಮುಕುಲ್ ರಾಯ್ ಬಿಜೆಪಿ ಸೇರಿದ್ದರು. ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ಅವರು ಪಶ್ಚಿಮ ಬಂಗಾಳದ ಕೃಷ್ಣ ನಗರದ ವಿಧಾನಸಭೆ ಕ್ಷೇತ್ರದ ಶಾಸಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.