ನವದೆಹಲಿ: ಬಿಜೆಪಿ ನಾಯಕಿ ರಾಧಿಕಾ ಖೇರಾ, ಹಜ್ ಸಮಿತಿ ಅಧ್ಯಕ್ಷೆ ಕೌಸರ್ ಜಹಾನ್ ಅವರು ಎಎಪಿ ರಾಜ್ಯಸಭೆ ಸದಸ್ಯೆ ಸ್ವಾತಿ ಮಾಲಿವಾಲ್ ಮೇಲಿನ ಹಲ್ಲೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿದ್ದಾರೆ.
ಹಲ್ಲೆ ಪ್ರಕರಣ ಸಂಬಂಧ ಸುದ್ದಿಸಂಸ್ಥೆ ‘ಎಎನ್‌ಐ’ ಜತೆ ಮಾತನಾಡಿರುವ ರಾಧಿಕಾ ಖೇರಾ ಅವರು, ‘ಎಎಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಮಹಿಳಾ ವಿರೋಧಿ ಪಕ್ಷಗಳಾಗಿವೆ. ಸ್ವಾತಿ ಮಾಲಿವಾಲ್ ಮೇಲಿನ ಹಲ್ಲೆ ಪ್ರಕರಣವನ್ನು ಎಎಪಿ ನಾಯಕರೇ ಆಗಿರುವ ಸಂಜಯ್ ಸಿಂಗ್ ಅವರು ಖಂಡಿಸಿದ್ದಾರೆ. ಇಷ್ಟು ದೊಡ್ಡ ಘಟನೆ ನಡೆದಿದ್ದರೂ ಆರೋಪಿ ಬಿಭವ್ ಕುಮಾರ್ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ‘ ಎಂದು ವಾಗ್ದಾಳಿ ನಡೆಸಿದ್ದಾರೆ.
‘ಎಫ್‌ಐಆರ್ ದಾಖಲಾಗಿದ್ದರೂ ಬಿಭವ್ ಕುಮಾರ್ ಅವರು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರೊಂದಿಗೆ ಏಕೆ ತಿರುಗಾಡುತ್ತಿದ್ದಾರೆ?, ಮುಖ್ಯಮಂತ್ರಿ ಕಚೇರಿಯಲ್ಲಿ ಎಎಪಿ ಪಕ್ಷದ ರಾಜ್ಯಸಭೆ ಸಂಸದರಿಗೆ ಸುರಕ್ಷತೆ ಇಲ್ಲವೇ?, ಪಕ್ಷದ ವಕ್ತಾರರಿಗೆ ಸುರಕ್ಷತೆ ಇಲ್ಲದಿದ್ದರೆ ಅವರು (ಕೇಜ್ರಿವಾಲ್) ಹೇಗೆ ಮತ ಕೇಳುತ್ತಿದ್ದಾರೆ?, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ‘ನಾನು ಹೆಣ್ಣು ಹೋರಾಡಬಲ್ಲೆ’ ಎಂದು ಹೇಗೆ ಹೇಳುತ್ತಾರೆ’ ಎಂದು ರಾಧಿಕಾ ಪ್ರಶ್ನಿಸಿದ್ದಾರೆ.
ಸ್ವಾತಿ ಮಾಲಿವಾಲ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ರಾಜ್ಯ ಹಜ್ ಸಮಿತಿ ಅಧ್ಯಕ್ಷ ಕೌಸರ್ ಜಹಾನ್ ಪ್ರತಿಕ್ರಿಯಿಸಿದ್ದು, ‘ಸ್ವಾತಿ ಸಲ್ಲಿಸಿರುವ ದೂರು, ವಿವರಗಳನ್ನು ಗಮನಿಸಿ ನಾನು ಆಘಾತಕ್ಕೊಳಗಾಗಿದ್ದೇನೆ. ದುರದೃಷ್ಟಕರ ಸಂಗತಿಯೆಂದರೆ ಮುಖ್ಯಮಂತ್ರಿ ಕಚೇರಿಯಲ್ಲೇ ಘಟನೆ ನಡೆದಿದೆ. ಅರವಿಂದ ಕೇಜ್ರಿವಾಲ್ ಅವರೇ ಈ ಘಟನೆಯ ಪ್ರಮುಖ ಸಾಕ್ಷಿಯಾಗಿದ್ದಾರೆ. ಖುದ್ದು ಅವರೇ, (ಕೇಜ್ರಿವಾಲ್) ಆರೋಪಿ ವಿರುದ್ಧ ಪೊಲೀಸರಿಗೆ ದೂರು ನೀಡಬೇಕಿತ್ತು. ಜತೆಗೆ ಕ್ಷಮೆಯಾಚಿಸಬೇಕಿತ್ತು’ ಎಂದು ಆಗ್ರಹಿಸಿದ್ದಾರೆ.
‘ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಿವಾಸಕ್ಕೆ ತೆರಳಿದ್ದಾಗ, ಅವರ ಕಾರ್ಯದರ್ಶಿಯಾಗಿರುವ ಬಿಭವ್ ಕುಮಾರ್ ತಮ್ಮ ಜೊತೆಗೆ ಅನುಚಿತವಾಗಿ ವರ್ತಿಸಿದ್ದು, ದೈಹಿಕವಾಗಿ ಹಲ್ಲೆ ನಡೆಸಿದ್ದರು’ ಎಂದು ಸಂಸದೆ ಸ್ವಾತಿ ಮಾಲಿವಾಲ್ ಅವರು ಈಚೆಗೆ ಆರೋಪಿಸಿದ್ದರು.
ಸಿಎಂ ಕಚೇರಿಯಲ್ಲಿ ಪ್ರಮುಖ ಸ್ಥಾನದಲ್ಲಿರುವ ಬಿಭವ್ ಕುಮಾರ್ ವಿರುದ್ಧ ಕೇಳಿಬಂದ ಆರೋಪವು ಈಗ ವಿವಾದಕ್ಕೆ ತಿರುಗಿದ್ದು, ಪ್ರತಿಪಕ್ಷಗಳ ತೀವ್ರ ಟೀಕೆಗೂ ಗುರಿಯಾಗಿದೆ. ಎಎಪಿಯ ರಾಜ್ಯಸಭೆ ಸದಸ್ಯ ಸಂಜಯ್ ಸಿಂಗ್ ಅವರು ಕೂಡ ಹಲ್ಲೆ ಕೃತ್ಯವನ್ನು ಖಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.