ಭುವನೇಶ್ವರ: ‘ಜಗನ್ನಾಥ ದೇವರು ಮೋದಿ ಅವರ ಭಕ್ತ’ ಎಂಬ ಹೇಳಿಕೆ ವಿವಾದದ ರೂಪ ಪಡೆಯುತ್ತಿದ್ದಂತೆಯೇ ಪುರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಬಿತ್ ಪಾತ್ರಾ ಕ್ಷಮೆಯಾಚಿಸಿದ್ದು, ಪ್ರಾಯಶ್ಚಿತ್ತವಾಗಿ ಮಂಗಳವಾರದಿಂದ ಮೂರು ದಿನ ಉಪವಾಸ ಮಾಡುವುದಾಗಿ ಹೇಳಿದ್ದಾರೆ.
ಒಡಿಯಾ ಭಾಷೆಯಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡುತ್ತಾ ಸಂಬಿತ್ ಈ ರೀತಿ ಹೇಳಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ಹೇಳಿಕೆಯನ್ನು ಟೀಕಿಸಿದ್ದ ಕಾಂಗ್ರೆಸ್, ಬಿಜೆಡಿ, ಎಎಪಿ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಇದಕ್ಕೆ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದವು.
ಪುರಿ ಜಗನ್ನಾಥ ಮಂದಿರದ ಮುಂಭಾಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಕಾಂಗ್ರೆಸ್ ವಕ್ತಾರ ಪವನ್ ಖೇರಾ, ‘ಸಂಬಿತ್ ಕಾಂಗ್ರೆಸ್‌ನಲ್ಲಿ ಇದ್ದಿದ್ದರೆ, ತಕ್ಷಣವೇ ಅವರನ್ನು ಪಕ್ಷದಿಂದ ಉಚ್ಚಾಟಿಸುತ್ತಿದ್ದೆವು. ಜಗನ್ನಾಥನ ಕೋಟ್ಯಂತರ ಭಕ್ತರ ಭಾವನೆಯೊಂದಿಗೆ ಆಟ ಆಡಿದ ಸಂಬಿತ್ ಅವರನ್ನು ಪ್ರಧಾನಿ, ಪಕ್ಷದಿಂದ ಉಚ್ಚಾಟಿಸಬೇಕು’ ಎಂದು ಹೇಳಿದ್ದರು.
‘ಬಿಜೆಪಿ ವಕ್ತಾರರಾದ ಸಂಬಿತ್ ಹೇಳಿಕೆಗಾಗಿ ಪ್ರಧಾನಿ ಮೋದಿ ಅವರು 24 ಗಂಟೆಗಳ ಒಳಗೆ ಜಗನ್ನಾಥನ ಕೋಟ್ಯಂತರ ಭಕ್ತರ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದ್ದರು.
ಅದಕ್ಕೆ ಪ್ರತಿಕ್ರಿಯಿಸಿದ್ದ ಸಂಬಿತ್, ತಾನು ಬಾಯಿ ತಪ್ಪಿ ಹಾಗೆ ಹೇಳಿದ್ದಾಗಿ ತಿಳಿಸಿದ್ದರು. ಮೋದಿ ಜಗನ್ನಾಥ ದೇವರ ಭಕ್ತ ಎಂದು ಹೇಳಲು ಹೋಗಿ ಅದಲುಬದಲು ಹೇಳಿಕೆ ನೀಡಿದ್ದೆ ಎಂದಿದ್ದರು.
ಈ ಬಗ್ಗೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಸಂಬಿತ್, ‘ಈ ತಪ್ಪಿಗಾಗಿ ನಾನು ಜಗನ್ನಾಥನ ಪಾದದಡಿ ಕ್ಷಮೆ ಕೇಳುತ್ತೇನೆ’ ಎಂದಿದ್ದಾರೆ.
ಏತನ್ಮಧ್ಯೆ, ಪುರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯನಾರಾಯಣ ಪಟ್ನಾಯಕ್ ಅವರು ಪುರಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರಾಮ, ವಿಷ್ಣುವಿಗೂ ಹೋಲಿಸಿದ್ದರು: ವಿವಾದದ ಬಗ್ಗೆ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಮಾತನಾಡಿರುವ ಕಾಂಗ್ರೆಸ್ ವಕ್ತಾರರಾದ ಸುಪ್ರಿಯಾ ಶ್ರೀನೆತ್, ‘ಇಂಥ ಪ್ರಚಾರಗಳನ್ನು ನಾವು ಚರಿತ್ರೆಯಲ್ಲೂ ಕಾಣಬಹುದು. ಹಿಟ್ಲರ್ ತನ್ನನ್ನು ತಾನು ದೇವರ ಪ್ರತಿರೂಪ ಎಂದು ಕರೆದುಕೊಳ್ಳುತ್ತಿದ್ದರು. ಕಿಮ್ ಜಾಂಗ್ ಉನ್ ಕೂಡ ತನ್ನಲ್ಲಿ ‘ದೈವೀ ಶಕ್ತಿ’ ಇದೆ ಎನ್ನುತ್ತಿದ್ದರು. ಸಂಬಿತ್ ಪಾತ್ರಾ ಕೂಡ ಜಗನ್ನಾಥ ಮೋದಿ ಅವರ ಭಕ್ತ ಎಂದು ಕರೆದಿದ್ದಾರೆ. ಆದರೆ, ಇದೆಲ್ಲ ವಿವಾದ ಆಗುತ್ತಿದ್ದಂತೆಯೇ ಬಾಯಿ ತಪ್ಪಿ ಹೇಳಿದ್ದೇನೆ ಎನ್ನುತ್ತಿದ್ದಾರೆ’ ಎಂದರು.
‘ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿಯೂ ಇದೇ ರೀತಿ ಮೋದಿ ಅವರನ್ನು ದೇವರಿಗಿಂತ ಮಿಗಿಲು ಎಂಬಂತೆ ಚಿತ್ರಿಸಲಾಗಿತ್ತು. ಮೋದಿ ಅವರು ವಿಷ್ಣುವಿನ ಅವತಾರ ಎಂದು ಚಂಪತ್ ರಾಯ್ ಹೇಳಿದ್ದರು. ಮೋದಿ ಅವರನ್ನು ಶ್ರೀರಾಮ ಎಂದು ಸಾಕ್ಷಿ ಮಹಾರಾಜ್ ಹೇಳಿದ್ದರು’ ಎಂದು ಟೀಕಿಸಿದರು.
‘ಮತಕ್ಕಾಗಿ ತಮಿಳರ ಹೆಸರು ಕೆಡಿಸುವ ಪ್ರಯತ್ನ’
ಚೆನ್ನೈ: ಪುರಿ ಜಗನ್ನಾಥನ ರತ್ನ ಭಂಡಾರದ ಕಣ್ಮರೆಯಾಗಿರುವ ಬೀಗದ ಕೈ ತಮಿಳುನಾಡಿನಲ್ಲಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಆಡಳಿತಾರೂಢ ಡಿಎಂಕೆ ಪಕ್ಷದ ಅಧ್ಯಕ್ಷ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ‘ಇದು ಮತ ಗಳಿಕೆಗಾಗಿ ತಮಿಳರ ಹೆಸರು ಕೆಡಿಸುವ ಪ್ರಯತ್ನ’ ಎಂದು ಮಂಗಳವಾರ ಆರೋಪಿಸಿದ್ದಾರೆ. ಮೋದಿ ಇಂಥ ಪ್ರಯತ್ನಗಳನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ‘ಪ್ರಧಾನಿ ತಮ್ಮ ದ್ವೇಷ ಭಾಷಣಗಳ ಮೂಲಕ ಜನರ ನಡುವೆ ಶತ್ರುತ್ವ ಮತ್ತು ಕೋಪದ ಭಾವನೆ ಬಿತ್ತುತ್ತಿದ್ದಾರೆ. ಈ ಮೂಲಕ ಕೋಟ್ಯಂತರ ಜನರಿಂದ ಪೂಜಿಸಲ್ಪಡುವ ಜಗನ್ನಾಥನಿಗೆ ಅವಮಾನ ಮಾಡಲಾಗಿದೆ ಮತ್ತು ಪರಸ್ಪರ ಉತ್ತಮ ಸಂಬಂಧ ಮತ್ತು ಸ್ನೇಹ ಹೊಂದಿರುವ ತಮಿಳುನಾಡು ಹಾಗೂ ಒಡಿಶಾ ರಾಜ್ಯಗಳ ಜನರನ್ನು ಗಾಸಿಗೊಳಿಸಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.