ಶ್ರೀನಗರ: ‘ಕಠುವಾ ಅತ್ಯಾಚಾರ ಪ್ರಕರಣದ ವರದಿಯ ದಾಟಿಯನ್ನು ಬದಲಿಸಿಕೊಳ್ಳದಿದ್ದರೆ ಇತ್ತೀಚೆಗೆ ಹತ್ಯೆಯಾದ ಪತ್ರಕರ್ತ ಶುಜಾತ್ ಬುಖಾರಿ ಗತಿಯೇ ನಿಮಗೂ ಬರುತ್ತದೆ’ ಎಂದು ಬಿಜೆಪಿ ಶಾಸಕ ಚೌಧರಿ ಲಾಲ್ ಸಿಂಗ್ ಪತ್ರಕರ್ತರಿಗೆ ಎಚ್ಚರಿಕೆ ನೀಡಿದ್ದಾರೆ.
ಜಮ್ಮುವಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಂಗ್, ‘ನೀವು ಬದಕುವ ಮತ್ತು ಬರೆಯುವ ನಡುವೆ ಸ್ಪಷ್ಟವಾದ ಗೆರೆ ಎಳೆದುಕೊಳ್ಳಿ. ಬರವಣಿಗೆಯ ಶೈಲಿ ಬದಲಿಸಿಕೊಳ್ಳಿ. ಇಲ್ಲದಿದ್ದರೆ ಬದುಕು ದುರ್ಬರವಾಗುತ್ತದೆ. ಶುಜಾತ್ ಬುಖಾರಿ ಸ್ಥಿತಿ ತಂದುಕೊಳ್ಳಬೇಡಿ’ ಎಂದು ಪತ್ರಕರ್ತರಿಗೆ ಪಾಠ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಕಠುವಾದಲ್ಲಿ ಎಂಟು ವರ್ಷದ ಮುಸ್ಲಿಂ ಕುರಿಗಾಹಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ಅಮಾನುಷವಾಗಿ ಹತ್ಯೆ ಮಾಡಲಾಗಿತ್ತು.
ಕಠುವಾ ಅತ್ಯಾಚಾರ ಪ್ರಕರಣದ ಆರೋಪಿಗಳ ಪರ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಪಿಡಿಪಿ–ಬಿಜೆಪಿ ಸರ್ಕಾರದ ಅರಣ್ಯ ಸಚಿವರಾಗಿದ್ದ ಚೌಧರಿ ಲಾಲ್ ಸಿಂಗ್ ಅವರನ್ನು ಸಂಪುಟದಿಂದ ಕೈಬಿಡಲಾಗಿತ್ತು.
ದೇಶ ವಿಭಜನೆಯ ಸಂದರ್ಭದಲ್ಲಿ ಕಾಶ್ಮೀರದಲ್ಲಿ ನಡೆದ ಮುಸ್ಲಿಮರ ನರಮೇಧ ಮರುಕಳಿಸುತ್ತದೆ ಎಂದು ಕಾಶ್ಮೀರದ ಗುಜ್ಜರ್ಸಮುದಾಯಕ್ಕೆ ಸಿಂಗ್ ಬೆದರಿಕೆ ಒಡ್ಡಿ, ಸುದ್ದಿಯಾಗಿದ್ದರು.
‘ಶುಜಾತ್ ಹತ್ಯೆಯು ಪತ್ರಕರ್ತರನ್ನು ಬೆದರಿಸುವ ಅಸ್ತ್ರವಾಗಿ ಬಳಕೆಯಾಗುತ್ತಿರುವುದು ವಿಷಾದನೀಯ’ ಎಂದು ನ್ಯಾಶನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.
ಉಗ್ರರ ಅಂತ್ಯಕ್ರಿಯೆ ದಕ್ಷಿಣ ಕಾಶ್ಮೀರದಲ್ಲಿ ಶುಕ್ರವಾರ ನಡೆದ ಕಾರ್ಯಾಚರಣೆಯಲ್ಲಿ ಹತರಾದ ನಾಲ್ವರು ಉಗ್ರರ ಅಂತ್ಯಕ್ರಿಯೆ ಶನಿವಾರ ನಡೆಯಿತು.
ಅಂತ್ಯಕ್ರಿಯೆ ಹಿನ್ನೆಲೆಯಲ್ಲಿ ಕಣಿವೆಯಾದ್ಯಂತ ಭಾರಿ ಕಟ್ಟೆಚ್ಚರ ವಹಿಸಲಾಗಿತ್ತು. ಅಂತ್ಯಕ್ರಿಯೆಯಲ್ಲಿ ಬಹಳ ಜನರು ಸೇರದಂತೆ ಭಾರಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಉಗ್ರರನ್ನು ಹುತಾತ್ಮರಂತೆ ಬಣ್ಣಿಸುವ ಮತ್ತು ಪ್ರಚೋದಾನಾತ್ಮಕಭಾಷಣಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದರು.
ಜಮ್ಮುವಿಗೆ ಅಮಿತ್ ಷಾ ಭೇಟಿ
ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದ ನಂತರ ಇದೇ ಮೊದಲ ಬಾರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಶನಿವಾರ ಜಮ್ಮುವಿಗೆ ಭೇಟಿ ನೀಡಿದ್ದರು.
ಜಮ್ಮುವಿನಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಿದ್ದ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಿಡಿಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡ ಬಿಜೆಪಿ ನಿಲುವನ್ನು ಸಮರ್ಥಿಸಿಕೊಂಡರು.
ರಾಜ್ಯದಲ್ಲಿಯ ಉದ್ಭವಿಸಿರುವ ರಾಜಕೀಯ ಪರಿಸ್ಥಿತಿಯ ಅವಲೋಕನ ನಡೆಸಿದ ಅವರು, ಪಕ್ಷದ ಡಿಜಿಟಲ್ ಮತ್ತು ಸಾಮಾಜಿಕ ಜಾಲತಾಣದ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದರು.
ಉಗ್ರರ ಜತೆ ನಿರ್ದಯ ವರ್ತನೆ: ಸಮರ್ಥನೆ
ನವದೆಹಲಿ: ಶರಣಾಗಲು ನಿರಾಕರಿಸುವ ಉಗ್ರರ ಜತೆ ಶಾಂತಿ ಮಾತುಕತೆ ಸಾಧ್ಯವಿಲ್ಲ. ಅವರೊಂದಿಗೆ ನಿರ್ದಯವಾಗಿ ವರ್ತಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಶನಿವಾರ ಹೇಳಿದ್ದಾರೆ.
‘ಉಗ್ರರ ಜತೆ ಕಠಿಣವಾಗಿ ವರ್ತಿಸುವುದು ಶಕ್ತಿ ಪ್ರದರ್ಶನವಲ್ಲ, ಕಾನೂನು ಪಾಲನೆ. ಉಗ್ರರನ್ನು ದಮನಿಸಲು ರಾಜಕೀಯ ಪರಿಹಾರಕ್ಕಾಗಿ ಎದುರು ನೋಡುತ್ತ ಕುಳಿತುಕೊಳ್ಳುವುದು ಸಾಧ್ಯವಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಣಿವೆ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಜಾರಿಯಾದ ನಂತರ ಕಾಶ್ಮೀರ ಸಮಸ್ಯೆಗೆ ಶಕ್ತಿಪ್ರದರ್ಶನದ ನೀತಿ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರವೃತ್ತಿ ಹೆಚ್ಚಬಹುದು ಎಂದು ಕಾಂಗ್ರೆಸ್ ಭೀತಿ ವ್ಯಕ್ತಪಡಿಸಿತ್ತು.
ಇದಕ್ಕೆ ತಿರುಗೇಟು ನೀಡಿರುವ ಜೇಟ್ಲಿ, ಕಾಂಗ್ರೆಸ್ ಮತ್ತು ಮಾನವ ಹಕ್ಕುಗಳ ಹೋರಾಟ ಸಂಘಟನೆಗಳ ವಿರುದ್ಧ ಹರಿಹಾಯ್ದಿದ್ದಾರೆ.
‘ಆತ್ಮಹತ್ಯಾ ದಳದ ಉಗ್ರರು ಸಾಯಲು ಸಿದ್ಧರಾಗಿರುತ್ತಾರೆ ಮತ್ತುಇತರರನ್ನು ಸಾಯಿಸಲೂ ತಯಾರಾಗಿರುತ್ತಾರೆ. ಅಂಥವರ ಎದುರುಸತ್ಯಾಗ್ರಹ ಕುಳಿತು ಸಮಸ್ಯೆ ಬಗೆಹರಿಸಲು ಸಾಧ್ಯವೇ’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
‘ಕೊಲ್ಲಲು ಸಿದ್ಧನಾಗಿ ಬರುವ ಉಗ್ರರ ಮೇಲೆ ಭದ್ರತಾ ಪಡೆಗಳು ಪ್ರತಿದಾಳಿ ನಡೆಸುವ ಬದಲು ಅವರನ್ನು ಕೂಡಿಸಿಕೊಂಡು ಮಾತುಕತೆ ನಡೆಸಬೇಕೆ’ ಎಂದು ಕೇಳಿದ್ದಾರೆ.
ಕಣಿವೆಯ ಜನಸಾಮಾನ್ಯರಿಗೆ ಭಯೋತ್ಪಾದನೆ ಸಮಸ್ಯೆಯಿಂದ ಮುಕ್ತಿ ದೊರೆಕಿಸಿ, ನೆಮ್ಮದಿಯ ಜೀವನ ರೂಪಿಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ತಿರುಗೇಟು: ನಕ್ಸಲೀಯರು ಮತ್ತು ಜಿಹಾದಿಗಳ ಬಗ್ಗೆ ರಾಹುಲ್ ಗಾಂಧಿ ಹೃದಯದಲ್ಲಿ ಅನುಕಂಪವಿದೆ ಎಂಬ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿಕೆ ಅಸಂಬದ್ಧ ಮತ್ತು ಹಾಸ್ಯಾಸ್ಪದ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
ಈ ಎರಡೂ ಗುಂಪುಗಳನ್ನು ಕಾಂಗ್ರೆಸ್ ಪ್ರಬಲವಾಗಿ ವಿರೋಧಿಸುತ್ತದೆ ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಹೇಳಿದ್ದಾರೆ.
ಕಾಂಗ್ರೆಸ್ ಸೈದ್ಧಾಂತಿಕವಾಗಿ ಮತ್ತು ಐತಿಹಾಸಿಕವಾಗಿ ನಕ್ಸಲೀಯರು ಮತ್ತು ಜಿಹಾದಿಗಳ ವಿರುದ್ಧ ಹೋರಾಡುತ್ತಾ ಬಂದಿದ್ದರೂ ರಾಹುಲ್ ಹೃದಯದಲ್ಲಿ ಅವರಿಗೆ ಜಾಗವಿದೆ ಎಂದು ಅರುಣ್ ಜೇಟ್ಲಿ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.
ಛತ್ತೀಸಗಡದಲ್ಲಿ ಮಾವೊವಾದಿಗಳ ದಾಳಿಯಲ್ಲಿ ಕಾಂಗ್ರೆಸ್ ತನ್ನ ಅನೇಕ ನಾಯಕರನ್ನು ಕಳೆದುಕೊಂಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಕಾಂಗ್ರೆಸ್ ಸತತ ಹೋರಾಟ ನಡೆಸುತ್ತಾ ಬಂದಿದೆ ಎಂದು ಚಿದಂಬರಂ ತಿರುಗೇಟು ನೀಡಿದ್ದಾರೆ.
ಉಗ್ರರ ದಮನಕ್ಕೆ ‘4ಡಿ’ ತಂತ್ರ!
ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ನಿರ್ದಯವಾಗಿ ದಮನಿಸಲು ಕೇಂದ್ರ ಸರ್ಕಾರ ಕಾರ್ಯತಂತ್ರವನ್ನು ಬದಲಾಯಿಸಿದೆ.
ಡಿಫೆಂಡ್ (ರಕ್ಷಣೆ), ಡೆಸ್ಟ್ರಾಯ್ (ನಾಶ), ಡಿಫೀಟ್ (ಮಣಿಸು) ಡಿನೈ(ನಿರಾಕರಿಸು) ಎಂಬ ‘4ಡಿ’ ತಂತ್ರವನ್ನು ರಕ್ಷಣಾ ಸಚಿವಾಲಯ ಹೆಣೆದಿದೆ.
ಕಣಿವೆ ರಾಜ್ಯದಲ್ಲಿಯ ನಿಯೋಜಿಸಲಾಗಿರುವ ಸೇನಾಪಡೆಗಳಿಗೆ ‘4ಡಿ’ ತಂತ್ರವನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ.
ಹುರಿಯತ್ ನಾಯಕರು ಮತ್ತು ಪ್ರತ್ಯೇಕತಾವಾದಿಗಳ ವಿರುದ್ಧ ಕಠಿಣ ನಿಲುವು ತೆಳೆಯಲು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಕಲ್ಲು ತೂರಾಟಗಾರರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂತೆಗೆದುಕೊಳ್ಳದಿರಲು ಮತ್ತು ಅವರಿಗೆ ದಯೆ ತೋರದಿರಲು ತೀರ್ಮಾನಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.